



ಡೈಲಿ ವಾರ್ತೆ: 03/ಅ./2025

ಧರ್ಮದ ಹೆಸರಿನಲ್ಲಿ ಬಿರುಕು ತರುವ ಬಿ ಎಲ್ ಸಂತೋಷ್ ಅವರ ನಡೆಗೆ ನಾಗೇಂದ್ರ ಪುತ್ರನ್ ಕೋಟ ಆಕ್ರೋಶ

ಸಂದರ್ಭಗಳನ್ನು ಬಳಸಿ ಭಾರತವನ್ನು ಮಾತೇ ಎಂದು ಭಕ್ತಿ ಭಾವದಿಂದ ಕರೆಯುವ ಬಿಜೆಪಿ ಅಸಲಿಗೆ ಮಾತೆ, ಮಾನಿನೀಯರ ಮೇಲೆ ಅತ್ಯಾಚಾರವಾದಾಗ, ಅವರ ಭೀಷಣ ಹತ್ಯೆಗಳಾದಾಗ ಅವರ ನಿಜ ಸ್ವರೂಪ ಹೇಗಿರುತ್ತದೆ ಎಂದು ಧರ್ಮಸ್ಥಳ ಪ್ರಕರಣ ಬಟಾಬಯಲು ಮಾಡಿದೆ.
ಧರ್ಮಸ್ಥಳದ ಮೇಲೆ ಯಾವುದೇ ಧಾರ್ಮಿಕ ಆಕ್ರಮಣ ನಡೆಯುತ್ತಿಲ್ಲ, ಬಿಜೆಪಿ ಅವರು ತಮ್ಮ ಎಂದಿನ ಚಾಳಿಯಂತೆ ರಾಜಕೀಯಕ್ಕೋಸ್ಕರ ನಮ್ಮ ಹಿಂದೂ ದೇವಸ್ಥಾನಕ್ಕೆ, ನಮ್ಮ ಧಾರ್ಮಿಕ ಭಾವನೆಗಳಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಕಣ್ಣೆದುರಿಗೆ ಕೆಮೆರಾ, ಕೈಗೆ ಮೈಕ್ ಸಿಗುತ್ತಿದ್ದಂತೆ ಅಪ್ರತಿಮ ದೇಶ ಭಕ್ತನಾಗುವ ಬಿ. ಎಲ್. ಸಂತೋಷ್ ಅವರು ಉಡುಪಿಗೆ ಶಿಲಾನ್ಯಾಸಕ್ಕೆ ಬಂದಿದ್ದೋ ಅಥವಾ ಧರ್ಮಸ್ಥಳದಲ್ಲಿ ನ್ಯಾಯಯುತವಾಗಿ ನಡೆಯುತ್ತಿರುವ SIT ತನಿಖೆಯನ್ನು ಅನುಮಾನಿಸಲು ಬಂದಿದ್ದೋ? ಅವರೇ ಹೇಳಬೇಕಾಗಿದೆ.
ಬಿಜೆಪಿಯ ಓರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಿಂದೂ ಹುಡುಗಿಯರನ್ನು ಬೆತ್ತಲು ಮಾಡಿ ಅಮಾನುಷವಾಗಿ ಅತ್ಯಾಚಾರ ಗೈದು, ಭೀಷಣವಾಗಿ ಹತ್ಯೆ ಗೈದವರ ಜನ್ಮ ಜಾಲಾಡುತ್ತಿರುವ ರಾಜ್ಯ ಸರಕಾರದ SIT ತನಿಖೆಗೆ ಬೆಂಬಲ ಸೂಚಿಸುದು ಬಿಟ್ಟು, ಅಮಾಯಕರ ನೆತ್ತರಿನ ಮುಂಡಾಸು ಧರಿಸಿರುವವರ ಪರ ತನ್ನ ನಾಲಿಗೆಯನ್ನು ಬೇಕಾಬಿಟ್ಟಿ ಹರಿದಾಡಿಸುವುದನ್ನು ನೋಡಿದರೆ ಬಿ.ಎಲ್. ಸಂತೋಷ್ ಅವರಿಗೆ ಹಿಂದೂ ಯುವತಿಯರ, ಮಹಿಳೆಯರ ಮೇಲೆ ಅದ್ಯಾವ ರೀತಿಯ ಗೌರವ ಇದೆ ಎಂದು ಸಾಬೀತು ಪಡಿಸಿದ್ದಾರೆ.
ಸಭೆ, ಸಮಾರಂಭ, ಭಾಷಣಗಳಲ್ಲಿ ಭಗಿನಿ, ಭುವನೇಶ್ವರಿ, ಮಾತೆ, ಮಹಾತಾಯಿ ಎಂದು ಮಹಿಳೆಯರನ್ನು ದೇವಿಯ ಪಟ್ಟಕ್ಕೇರಿಸುವ ಇವರ ಭಗೀನಿಯರು ಕಾಮುಕರ ಭೀಷಣತೆ ಬಲಿಯಾಗಿ ಉಸಿರು ಚೆಲ್ಲಿದರೂ ಆರೋಪಿಗಳ ವಿರುದ್ಧ ಇವರು ಉಸಿರೆತ್ತುದಿಲ್ಲ.
ಹಿಂದುತ್ವದ ವಿಷಯದಲ್ಲಿ ಮಾತು ಮಾತಿಗೂ ಆಕ್ರಮಣ, ನೆತ್ತರು, ತ್ರಿಶೂಲ,ಹುಲಿ,ಸಿಂಹ ಎಂದು ಘರ್ಜಿಸಿ ಧರ್ಮ ಧರ್ಮಗಳ ನಡುವೆ ಕಿಚ್ಚಿಟ್ಟು ಯಾರಾದ್ದೋ ಬಡ ಅಮಾಯಕ ಹಿಂದೂ ಮಕ್ಕಳ ಬಲಿ ಪಡೆದು ಅವರ ಸಂಸಾರವನ್ನು ಬೀದಿಗೆ ತರುವ ಇವರಿಗೆ ಹಿಂದೂ ಧಾರ್ಮಿಕ ಕ್ಷೇತ್ರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.
ಬಿಜೆಪಿಯವರು ತಮ್ಮ ರಾಜಕೀಯ,ಅಧಿಕಾರಗೋಸ್ಕರ ಮುಗ್ಧ ಹಿಂದೂ ಯುವಕರ ನೆತ್ತರು ಹರಿಸಿದ್ದು ಸಾಕು.
ಕಾಲ ಚಕ್ರ ತಿರುಗಲೇ ಬೇಕು ನಿಮ್ಮಂತಹ ಸ್ವಾರ್ಥಿ, ಕಪಟಿ ಭಾಷಣಕಾರರಿಂದ ಹಿಂದೂ ಸಮಾಜ ಉದ್ಧಾರವಾಗುವುದಿಲ್ಲ, ಬದಲಾಗಿ ಅಧೋಗತಿಗೆ ಸಾಗುತ್ತಿದೆ ಹಾಗಂತ ಹಿಂದೂ ಯುವ ಪೀಳಿಗೆಗೆ ಇದೀಗ ಅರ್ಥವಾಗುತ್ತಿದೆ.
ಹಿಂದೂ ತೀರ್ಥಕ್ಷೇತ್ರಗಳು ಹಿಂದಿನಿಂದಲೂ ಬಹಳ ಶ್ರೇಷ್ಠ ವಾಗಿದ್ದು ಅಲ್ಲಿ ಯಾವುದೇ ರಾಜಕೀಯ ಇರಲಿಲ್ಲ, ಬಿಜೆಪಿ ಹಾಗೂ ಬಿಜೆಪಿಯಲ್ಲಿ ತುಂಬಿ ಹೋಗಿರುವ ಬಿ.ಎಲ್. ಸಂತೋಷ್ ರಂತಹ ಧರ್ಮಾಂಧರಿಂದ ಇಂದು ಹಿಂದೂ ಸಮಾಜ, ಹಿಂದೂ ಧಾರ್ಮಿಕ ಕೇಂದ್ರಗಳು ತಮ್ಮ ಪಾವಿತ್ರ್ಯ, ಗೌರವ, ನಂಬಿಕೆಗಳನ್ನು ಕಳೆದು ಕೊಳ್ಳುತ್ತಿವೆ.
ಸ್ವಾತಂತ್ರ್ಯಗಳಿಸಿದ ನಂತರ ಕಾಂಗ್ರೆಸ್ ಹಾಕಿಕೊಟ್ಟ ಭದ್ರ ಬುನಾದಿ ವಿಶ್ವದಲ್ಲಿಯೇ ಹಿಂದೂ ಸಮಾಜವೆಂದರೆ ಶಾಂತಿ ಸೌಹಾರ್ದತೆಯ ‘ಸಂಕೇತವಾಗಿ ಗುರ್ತಿಸಲ್ಪಡುತ್ತಿತ್ತು.
ಆದರೆ ತನ್ನ ರಾಜಕೀಯ ಲಾಲೆಸೆಗಾಗಿ ಬಿಜೆಪಿ ಅದನ್ನು ನೆತ್ತರುಮಯವಾಗಿಸಿದೆ ಎನ್ನುವುದನ್ನು ಪ್ರತಿಯೊರ್ವ ಹಿಂದೂಗಳು ಅರಿಯುವ ಸಮಯ ದೂರವಿಲ್ಲ ಎಂದು ಪುತ್ರನ್ ಅವರು ಭಾವೋದ್ವೆಗದಿಂದ ಮಾಧ್ಯಮ ದವರೊಂದಿಗೆ ಹೇಳಿದ್ದಾರೆ.