ಡೈಲಿ ವಾರ್ತೆ: 03/ಅ./2025

ಕಾರ್ಕಳ| ಪ್ರೀತಿಗಾಗಿ ಮನೆ ಬಿಟ್ಟು ಹೋಗುವ ಮಗಳನ್ನು ಹತ್ಯೆಗೈದ ತಾಯಿ!

ಕಾರ್ಕಳ: ಪ್ರೀತಿಯ ಕಾರಣಕ್ಕೆ ಮನೆ ಬಿಟ್ಟು ಹೋಗುವುದಾಗಿ ತಿಳಿಸಿದ್ದ ಮಗಳನ್ನು ತಾಯಿಯೇ ಹತ್ಯೆ ಮಾಡಿದ ಭೀಕರ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿಯಲ್ಲಿ ಬೆಳಕಿಗೆ ಬಂದಿದೆ.

ಮೃತಳನ್ನು ಶೇಖ್ ಮುಸ್ತಫಾ ಅವರ ಮಗಳು ಶಿಫನಾಝ್ (17) ಎಂದು ಗುರುತಿಸಲಾಗಿದೆ. ಆರೋಪಿಯಾದ ತಾಯಿ ಗುಲ್ಝಾರ್ ಬಾನು (45) ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 20ರಂದು ತಾಯಿ-ಮಗಳ ನಡುವೆ ಪ್ರೀತಿಯ ವಿಚಾರವಾಗಿ ವಾಗ್ವಾದ ಉಂಟಾಗಿತ್ತು.
ಆ ವೇಳೆ ಶಿಫನಾಝ್ ತನ್ನ ಗೆಳೆಯನೊಂದಿಗೆ ಮನೆ ಬಿಟ್ಟು ಹೋಗುವುದಾಗಿ ಹೇಳಿದ್ದಳು. ಇದರಿಂದ ಆಕ್ರೋಶಗೊಂಡ ತಾಯಿ, ಮಗಳ ಬಾಯಿಗೆ ಬಟ್ಟೆ ತುರುಕಿಸಿ, ಕುತ್ತಿಗೆ ಹಿಸುಕಿಕೊಂಡು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ, ಶಿಫನಾಝ್ನ ತಂದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಶಿಫನಾಝ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದು ಬಹಿರಂಗವಾಯಿತು. ಬಳಿಕ ಪೊಲೀಸರು ತಾಯಿಯನ್ನು ವಿಚಾರಣೆಗೊಳಪಡಿಸಿದಾಗ ಘಟನೆಯ ಸತ್ಯ ಹೊರಬಿದ್ದಿದೆ. ಈ ವೇಳೆ ತಾನು ಕೊಲೆ ಮಾಡಿರುವ ವಿಚಾರ ಒಪ್ಪಿಕೊಂಡಿದ್ದಾಳೆ.
ಅ. 2 ರಂದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.