ಡೈಲಿ ವಾರ್ತೆ: 10/ಅ./2025

ನೆಜಾರ್‌ನ ಪ್ರಣತಿ ಜತನ್‌ಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌’ ಮನ್ನಣೆ: ಎಸ್‌ಸಿಐ ನೆಜಾರ್ ಲೀಜನ್‌ನಿಂದ ಸನ್ಮಾನ

ಉಡುಪಿ: ಕಲೆಗೆ ವಯಸ್ಸಿನ ಮಿತಿ ಇಲ್ಲ, ಸಾಧನೆಗೆ ಅಂತರಗಳಿಲ್ಲ ಎಂಬ ಮಾತಿನ ನಿಜವಾದ ಉದಾಹರಣೆ ಬ್ರಹ್ಮಾವರ ತಾಲೂಕಿನ ನೆಜಾರ್ ಗ್ರಾಮದ ಯುವ ಕಲಾವಿದೆ ಕುಮಾರಿ ಪ್ರಣತಿ ಜತನ್.

ಇವರು ಕೇವಲ ಎಳೆಯ ವಯಸ್ಸಿನಲ್ಲೇ ಚಿತ್ರಕಲೆಯಲ್ಲಿ ಅಸಾಧಾರಣ ಪ್ರತಿಭೆ ತೋರಿಸಿ, ಭಾರತೀಯ ಸಂಸ್ಕೃತಿಯ ಮಹಾಕಾವ್ಯ ರಾಮಾಯಣವನ್ನು ಕ್ಯಾನ್ವಾಸ್‌ನಲ್ಲಿ ಜೀವಂತಗೊಳಿಸುವ ಮೂಲಕ ಪ್ರಣತಿಯವರು ಇದೀಗ ಅಂತರರಾಷ್ಟ್ರೀಯ ಮಟ್ಟದ ಗುರುತಿಗೆ ಪಾತ್ರರಾಗಿದ್ದಾರೆ. ಅವರ ಈ ಅಪೂರ್ವ ಕಲಾಕೃತಿಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌’ ನಲ್ಲಿ ಸ್ಥಾನ ದೊರೆತಿದ್ದು, ಈ ಸಾಧನೆಗಾಗಿ ಅವರನ್ನು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ (ಎಸ್‌ಸಿಐ) ನೆಜಾರ್ ಲೀಜನ್ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಪ್ರಣತಿ ಜತನ್ ಶ್ರೀಮತಿ ಸುಜಾತ ಮತ್ತು ಗೋವರ್ಧನ್ ಜತನ್ ದಂಪತಿಯ ಪುತ್ರಿ. 2008ರ ಸೆಪ್ಟೆಂಬರ್ 2ರಂದು ಜನಿಸಿದ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸಂತೆಕಟ್ಟೆಯ ಮೌಂಟ್ ರೋಸರಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪೂರ್ಣಗೊಳಿಸಿದ್ದು, ಪ್ರಸ್ತುತ ಉಡುಪಿಯ ವಿದ್ಯೋದಯ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಅವರು ಶೈಕ್ಷಣಿಕವಾಗಿ ಮಾತ್ರವಲ್ಲ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಸದಾ ಮುಂಚೂಣಿಯಲ್ಲಿದ್ದಾರೆ.

ಬಾಲ್ಯದಿಂದಲೇ ಬಣ್ಣಗಳ ಲೋಕದತ್ತ ಆಕರ್ಷಿತರಾದ ಪ್ರಣತಿ, ಚಿತ್ರಕಲೆಯ ಮೂಲಕ ತಮ್ಮ ಭಾವನೆಗಳಿಗೆ ಜೀವ ತುಂಬುತ್ತಿದ್ದಾರೆ. 2015ರಲ್ಲಿ ತಾಲೂಕು ಮತ್ತು ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿ ತಮ್ಮ ಕಲಾ ಪಯಣವನ್ನು ಪ್ರಾರಂಭಿಸಿದರು. ನಂತರ ಜಲವರ್ಣ, ಆಕ್ರಿಲಿಕ್, ಪೆನ್ಸಿಲ್ ಸ್ಕೆಚಿಂಗ್ ಮೊದಲಾದ ಹಲವು ಶೈಲಿಗಳಲ್ಲಿ ತೊಡಗಿಸಿಕೊಂಡು ನಿರಂತರ ಅಭ್ಯಾಸದ ಮೂಲಕ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡಿದ್ದಾರೆ.

ಅವರ ಕಲಾ ಜೀವನದ ಅತ್ಯಂತ ಮಹತ್ವದ ಮೈಲಿಗಲ್ಲು ಎಂದರೆ ರಾಮಾಯಣಾಧಾರಿತ ಬೃಹತ್ ಕ್ಯಾನ್ವಾಸ್‌ ಚಿತ್ರಕೃತಿ ಸುಮಾರು 6 ಅಡಿ ಅಗಲ ಮತ್ತು 2 ಅಡಿ ಎತ್ತರದ ಕ್ಯಾನ್ವಾಸ್‌ನಲ್ಲಿ ಶ್ರೀರಾಮನ ಜನನದಿಂದ ಹಿಡಿದು ಲಂಕಾ ದಹನ ಮತ್ತು ಪಟ್ಟಾಭಿಷೇಕದವರೆಗಿನ ರಾಮಾಯಣದ ಪ್ರಮುಖ ಘಟನಾವಳಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಈ ಸೃಜನಶೀಲ ಕೃತಿಯು ಕಲಾತ್ಮಕ ಶ್ರದ್ಧೆ, ತಾಳ್ಮೆ ಹಾಗೂ ಭಾರತೀಯ ಸಂಸ್ಕೃತಿಯ ಮೇಲಿನ ಅವರ ಭಾವನಾತ್ಮಕ ನಿಷ್ಠೆಗೆ ಸಾಕ್ಷಿಯಾಗಿದೆ.
ಈ ಕಾರಣಕ್ಕೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌’ ಪ್ರಣತಿಯವರ ಸಾಧನೆಯನ್ನು ಗುರುತಿಸಿ ದಾಖಲೆ ನೀಡಿದೆ.

ಕಲೆ ಮಾತ್ರವಲ್ಲದೆ, ಪ್ರಣತಿಯವರು ಬೌದ್ಧಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿಯೂ ತಮ್ಮ ಪ್ರಭಾವ ಮೂಡಿಸಿದ್ದಾರೆ. ಅಬಾಕಸ್‌ ಸ್ಪರ್ಧೆಗಳಲ್ಲಿ ಕೇರಳದ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಮತ್ತು ಬೆಂಗಳೂರಿನ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿ ತಮ್ಮ ಮಾನಸಿಕ ಲೆಕ್ಕಾಚಾರದ ನೈಪುಣ್ಯವನ್ನು ತೋರಿದ್ದಾರೆ. ಹಾಗೆಯೇ, ಕರಾಟೆ ತರಬೇತಿ ಪಡೆದು ಹಲವು ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಿ ಸ್ವರಕ್ಷಣಾ ಕೌಶಲ್ಯ ಹಾಗೂ ಶಿಸ್ತು ಮೈಗೂಡಿಸಿಕೊಂಡಿದ್ದಾರೆ.

ಅವರ ಈ ಅಸಾಧಾರಣ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ (ಎಸ್‌ಸಿಐ) ನೆಜಾರ್ ಲೀಜನ್ ಸಂಸ್ಥೆಯು ಯೂತ್ ವಿಂಗ್ ಸ್ಥಾಪನಾ ಸಮಾರಂಭದ ಸಂದರ್ಭದಲ್ಲಿ ಪ್ರಣತಿಯವರನ್ನು ಸನ್ಮಾನಿಸಿತು. ಬ್ರಹ್ಮಾವರದ ಹೋಟೆಲ್ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಡಿನ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಸನ್ಮಾನ್ಯ ಸುರೇಶ್ ಅಮೀನ್ ಅಧ್ಯಕ್ಷತೆ ವಹಿಸಿದ್ದು, ಪಿಪಿಎಫ್ ಜಗದೀಶ್ ಕೆಮ್ಮಣ್ಣುಗೌರವ ಅತಿಥಿಯಾಗಿ ಹಾಗೂ ಪಿಪಿಎಫ್ ಹುಸೇನ್ ಹೈಕಾಡಿ (ರಾಷ್ಟ್ರೀಯ ನಿರ್ದೇಶಕರು – ತರಬೇತಿ, ದೃಷ್ಟಿಕೋನ ಮತ್ತು ಯುವಜನ ವ್ಯವಹಾರ) ಉದ್ಘಾಟಕರಾಗಿ ಭಾಗವಹಿಸಿದರು. ಈ ಸಂದರ್ಭ ಪ್ರಣತಿಯವರ ಸಾಧನೆಗೆ ಪ್ರಶಂಸೆ ಸಲ್ಲಿಸಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.