



ಡೈಲಿ ವಾರ್ತೆ: 11/ಅ./2025

ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಯತ್ನ – ಉಡುಪಿಯಲ್ಲಿ ಹಲವು ಸಂಘಟನೆಗಳಿಂದ ಪ್ರತಿಭಟನೆ

ಉಡುಪಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಯುಎಪಿಎ ಕಾಯ್ದೆಯಡಿ ಕೇಸು ದಾಖಲಿಸಿ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲೆ ಮತ್ತು ಸಹಬಾಳ್ವೆ ಹಾಗೂ ಉಡುಪಿಯ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಿಭಟನೆ ನಡೆಯಿತು.
ಈ ದೇಶದಲ್ಲಿ ಸಂವಿಧಾನಬದ್ಧ ಆಡಳಿತ ಸ್ಥಾಪಿಸಲು ನಾವು ಮಾಡಿದ 100 ವರ್ಷಗಳ ಹೋರಾಟದ ಮೌಲ್ಯಗಳನ್ನು ನಿಧಾನವಾಗಿ ಮರೆಯುತ್ತಿದ್ದೇವೆ. ಈ ಮೌಲ್ಯಗಳನ್ನು ಮತ್ತೆ ಒಟ್ಟುಗೂಡಿಸಿ ವೈದಿಕಶಾಹಿ, ಜಮೀನ್ದಾರಿ, ಹೊಸ ಬಂಡವಾಳಶಾಹಿ ವಿರುದ್ಧ ಸಂಘಟಿತ ಹೋರಾಟ ಕಟ್ಟದಿದ್ದರೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಗೆ ಆಗಿರುವ ಅವಮಾನ ಇನ್ನೂ ಮುಂದುವರೆಯಲಿದೆಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದರು.
ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ ,ಇದು ಮನುವಾದ ಮತ್ತು ಅಂಬೇಡ್ಕರ್ ವಾದಿಗಳ ನಡುವಿನ ಸಂಘರ್ಷ.ಇವತ್ತು ಸಿಜೆಐ ಮೇಲೆ ನಾಳೆ ನಮ್ಮ ಮೇಲೂ ಇಂತಹ ಕೃತ್ಯ ನಡೆಯಬಹುದು ,ನಾವೆಲ್ಲ ಜಾಗರೂಕರಾಗಿರಬೇಕು ಎಂದು ಹೇಳಿದರು.
ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಅಲ್ಪಸಂಖ್ಯಾತರ ವೇದಿಕೆಯ ಜಿಲ್ಲಾಧ್ಯಕ್ಷ ಚಾರ್ಲ್ಸ್ ಆ್ಯಂಬರ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಇದ್ರೀಸ್ ಹೂಡೆ, ವಿದ್ಯಾರ್ಥಿ ಮುಖಂಡ ನಿಹಾಲ್ ಮಾತನಾಡಿದರು.ಈ ಸಂದರ್ಭದಲ್ಲಿ ವಕೀಲ ರಾಕೇಶ್ ಕಿಶೋರ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು.