



ಡೈಲಿ ವಾರ್ತೆ: 15/ಅ./2025

ಮಾಟ ಮಂತ್ರ ತೆಗೆಸುವುದಾಗಿ ನಂಬಿಸಿ ಚಿನ್ನ ದೋಚಿದ್ದ ನಕಲಿ ಬಾಬಾ ದಾದಾಪೀರ್ ಅಲಿಯಾಸ್ ವೆಂಕಟರಮಣ ಅಲಿಯಾಸ್ ಲಕ್ಷ್ಮೀ ನಾರಾಯಣನ ಬಂಧನ

ಬೆಂಗಳೂರು: ಮಾಟ-ಮಂತ್ರ ಮಾಡಿರುವುದನ್ನು ನಿಷ್ಕ್ರಿಯಗೊಳಿಸುತ್ತೇನೆ ಎಂದು ನಂಬಿಸಿ ಪೂಜೆ ನೆಪದಲ್ಲಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಮುಸ್ಲಿಂ ವ್ಯಕ್ತಿ ಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಮೂಲದ ದಾದಾಪೀರ್ ಅಲಿಯಾಸ್ ವೆಂಕಟರಮಣ ಅಲಿಯಾಸ್ ಲಕ್ಷ್ಮೀ ನಾರಾಯಣ(49) ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿಯಿಂದ 53 ಲಕ್ಷ ರೂ. ಮೌಲ್ಯದ 485 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ಮುಖ್ಯರಸ್ತೆ ಕೋಳಿಫಾರಂ ಗೇಟ್ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಹಿಂದೂ ಹೆಸರುಗಳನ್ನು ಇಟ್ಟುಕೊಂಡು ರಾಜ್ಯದ ವಿವಿಧೆಡೆ ಓಡಾಡುತ್ತಿದ್ದ. ಅಲ್ಲದೆ, ಕೆಲವೊಂದು ಏರಿಯಗಳಲ್ಲಿ ಬಾಡಿಗೆ ಮನೆ ಪಡೆದು ವಾಸವಾಗುತ್ತಿದ್ದ. ಈ ವೇಳೆ ತಾನೂ ಮಾಟ-ಮಂತ್ರ ಮಾಡಿರುವುದನ್ನು ನಿಷ್ಕ್ರಿಯಗೊಳಿಸುತ್ತೇನೆ, ನಿಧಿ ತೆಗೆಸಿ ಕೊಡುತ್ತೇನೆ ಎಂದು ನಂಬಿಸುತ್ತಿದ್ದ.
ಆತನ ಮಾತು ನಂಬುತ್ತಿದ್ದ ಸ್ಥಳೀಯರು ಈತನನ್ನು ಪೂಜೆಗೆಂದು ಮನೆಗೆ ಕರೆದೊಯ್ಯುತ್ತಿದ್ದರು. ಬಳಿಕ ಪೂಜೆ ಮಾಡುವಾಗ ಅವರಿಂದ ಒಂದು ಪಾತ್ರೆ ಪಡೆದು, ಅದಕ್ಕೆ ಮನೆಯವರ ಚಿನ್ನಾಭರಣಗಳನ್ನು ತುಂಬಿಸುತ್ತಿದ್ದ.
ನಂತರ 30 ನಿಮಿಷಗಳ ಕಾಲ ಪೂಜೆ ಇದೆ ಎಂದು ಹೇಳಿ, ಎಲ್ಲರನ್ನು ಹೊರಗಡೆ ಕಳುಹಿಸುತ್ತಿದ್ದ. ಈ ಮಧ್ಯೆ ಚಿನ್ನಾಭರಣಗಳನ್ನು ತನ್ನ ಜೋಳಿಗೆಗೆ ತುಂಬಿಕೊಂಡು, ಪಾತ್ರೆಗೆ ಬಟ್ಟೆ ಸುತ್ತಿ ಕಟ್ಟುತ್ತಿದ್ದ. ಬಳಿಕ ಮನೆಯವರನ್ನು ಕರೆದು, ಒಂದೂವರೆ ತಿಂಗಳವರೆಗೂ ಈ ಪಾತ್ರೆಯ ಬಟ್ಟೆಯನ್ನು ಬಿಚ್ಚಬಾರದು. ಬಳಿಕ ತಾನೇ ಬಂದು ತೆರೆಯುತ್ತೇನೆ ಎಂದು ಹೇಳಿ ಪರಾರಿಯಾಗುತ್ತಿದ್ದ ಎಂದು ತಿಳಿದುಬಂದಿದೆ.
ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಕೆ.ಎಂ. ಸತೀಶ್, ಪಿಐ ಬಿ.ಜಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಿಎಸ್‌ಐ ಅರವಿಂದ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
ಕೃತ್ಯ ಬಳಿಕ ಮೊಬೈಲ್, ಸಿಮ್ ಕಾರ್ಡ್ ಬದಲಾವಣೆ
ಕೃತ್ಯ ಎಸಗಿ ಪರಾರಿಯಾದ ಒಂದೆರಡು ದಿನಗಳ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಸಿಮ್ಕಾರ್ಡ್ ಗಳನ್ನು ಬದಲಾಯಿಸುತ್ತಿದ್ದ. ಇದೇ ರೀತಿ ಶಿವಮೊಗ್ಗ, ಭದ್ರಾವತಿ, ಹೊಸಕೋಟೆ, ಗಿರಿನಗರ, ಹುಳಿಮಾವು ಹಾಗೂ ಆಂಧ್ರಪ್ರದೇಶದ ಮೂರು ಠಾಣೆಗಳ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು. ಕಳವು ಆಭರಣಗಳ ಪೈಕಿ ಅರ್ಧದಷ್ಟು ಆಭರಣಗಳನ್ನು ಕೋಲಾರದ ತನ್ನ ವಾಸದ ಮನೆಯಲ್ಲಿ ಇಟ್ಟಿರುವುದಾಗಿ, ಉಳಿದ ಚಿನ್ನಾಭರಣಗಳನ್ನು ನಗರದ ಬಿಟಿಎಂ ಲೇಔಟ್‌ನ ಜ್ಯುವೆಲರಿ ಅಂಗಡಿ ಹಾಗೂ ಮಹಾರಾಷ್ಟ್ರದ ನಾಗಪುರದಲ್ಲಿರುವ ಜ್ಯುವೆಲರಿ ಅಂಗಡಿಯೊಂದರಲ್ಲಿ ಅಡವಿಟ್ಟಿರುವುದಾಗಿ ತಿಳಿಸಿದ್ದ. ಸದ್ಯ ಎಲ್ಲಾ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.