



ಡೈಲಿ ವಾರ್ತೆ: 18/ಅ./2025

ಬೆಂಗಳೂರು| ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಬರ್ಬರ ಹತ್ಯೆ ಪ್ರಕರಣ – ಇಬ್ಬರು ದುರುಳರ ಬಂಧನ!

ಬೆಂಗಳೂರು: ಕಣ್ಣಿಗೆ ಖಾರದಪುಡಿ ಎರಚಿ ವಿದ್ಯಾರ್ಥಿನಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ ದುರುಳ ಸೇರಿದಂತೆ ಇಬ್ಬರನ್ನು ನಗರದ ಶ್ರೀರಾಮಪುರ ಠಾಣೆ ಪೊಲೀಸರು ಸೆರೆಹಿಡಿದಿದ್ಧಾರೆ.
ಈ ದುಷ್ಕೃತ್ಯ ಎಸಗಿದ ಶ್ರೀರಾಮಪುರ ನಿವಾಸಿ ವಿಘ್ನೇಶ್ (28) ಮತ್ತು ಈತ ಪರಾರಿಯಾಗಲು ಸಹಕರಿಸಿದ ಸಹಚರ ಹರೀಶ್ ಎಂಬವನನ್ನು ಸೋಲದೇವನಹಳ್ಳಿ ಬಳಿ ಅರೆಸ್ಟ್ ಮಾಡಲಾಗಿದೆ.
ಆರೋಪಿಗಳನ್ನು ಇಂದು (ಶನಿವಾರ) ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ಯಾಮಿನಿ ಪ್ರಿಯಾ (20) ಬನಶಂಕರಿ ಖಾಸಗಿ ಕಾಲೇಜಿನಲ್ಲಿ ಬಿ.ಫಾರ್ಮ ವ್ಯಾಸಂಗ ಮಾಡುತ್ತಿದ್ದರು. ಗುರುವಾರ ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದರು. ಈ ಸಂದರ್ಭದಲ್ಲಿ ಮಲ್ಲೇಶ್ವರಂನ ಮಂತ್ರಿ ಮಾಲ್ ಹಿಂಭಾಗದ ರೈಲ್ವೇ ಟ್ರ್ಯಾಕ್ ಬಳಿ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ವಿಘ್ನೇಶ್, ಆಕೆಯ ಕಣ್ಣಿಗೆ ಖಾರದಪುಡಿ ಎರಚಿದ್ದಾನೆ. ಆ ಬಳಿಕ ಚಾಕುವಿನಿಂದ ಕತ್ತಿಗೆ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದ.
ತೀವ್ರವಾಗಿ ಗಾಯಗೊಂಡಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿ ವಿಶೇಷ ತಂಡ ರಚಿಸಿಕೊಂಡ ಪೊಲೀಸರು, ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿ ಸೋಲದೇವನಹಳ್ಳಿ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ವಿಘ್ನೇಶ್: ಯಾಮಿನಿ ಹಾಗೂ ವಿಘ್ನೇಶ್ ಒಂದೇ ಪ್ರದೇಶದ ನಿವಾಸಿಗಳಾಗಿದ್ದರು. ತನ್ನನ್ನು ಪ್ರೀತಿಸುವಂತೆ ಆರೋಪಿ ಯುವತಿ ಹಿಂದೆ ಬಿದ್ದಿದ್ದ. ಪೋಷಕರೊಂದಿಗೆ ಯುವತಿಯ ಮನೆಗೆ ಬಂದು ಮದುವೆ ಮಾಡಿಕೊಡುವಂತೆಯೂ ಕೇಳುತ್ತಿದ್ದ. ಇದನ್ನು ಯಾಮಿನಿಯ ಪೋಷಕರು ನಿರಾಕರಿಸಿದ್ದರು. ಈ ಮಧ್ಯೆ, ವಿವಾಹವಾಗುವಂತೆ ಯುವತಿಗೆ ಮತ್ತಷ್ಟು ಕಿರುಕುಳ ನೀಡುತ್ತಿದ್ದ. ಈ ಕುರಿತು ಕಳೆದ ಏಪ್ರಿಲ್ ತಿಂಗಳಲ್ಲಿ ದೂರು ನೀಡಿದ ಮೇರೆಗೆ ಆರೋಪಿಯನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ, ಮುಚ್ಚಳಿಕೆ ಪತ್ರ ಬರೆದು ಬಿಟ್ಟು ಕಳುಹಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಿಯಾರನ್ನು ಕೊಲ್ಲಲು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಪ್ಲ್ಯಾನ್?: ಪ್ರಿಯಾ ಅವರನ್ನು ಕೊಲ್ಲಲು ವಿಘ್ನೇಶ್ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡಿದ್ದ ಹೇಳಲಾಗುತ್ತಿದೆ. ಈ ಗ್ರೂಪ್‌ನಲ್ಲಿ ಯಾರೆಲ್ಲ ಸದಸ್ಯರಿದ್ದರು ಎಂಬುದು ತಿಳಿದು ಬಂದಿಲ್ಲ. ವಿದ್ಯಾರ್ಥಿನಿಯ ಚಲನವಲನದ ಬಗ್ಗೆ ಈ ಗ್ರೂಪ್‌ನಲ್ಲಿ ವಿಘ್ನೇಶ್ ಅಪ್‌ಡೇಟ್ ಮಾಡಿಕೊಳ್ಳುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರು ಪ್ರತಿಕ್ರಿಯಿಸಿ, “ಇಬ್ಬರು ಆರೋಪಿಗಳನ್ನು ಬಂಧಿಸಿ ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡಿರುವ ಬಗ್ಗೆ ಸದ್ಯಕ್ಕೆ ಗೊತ್ತಾಗಿಲ್ಲ. ಮೊಬೈಲ್‌ಗಳನ್ನು ರಿಟ್ರೀವ್ ಮಾಡಿದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ” ಎಂದು ಮಾಹಿತಿ ನೀಡಿದರು.