ಡೈಲಿ ವಾರ್ತೆ: 23/ಅ./2025

ಯತೀಂದ್ರ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಪಕ್ಷದ ತೀರ್ಮಾನವೇ ಅಂತಿಮ – ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ನಾವು 2028ಕ್ಕೆ ಸಿಎಂ ಕ್ಲೈಮ್ ಮಾಡುತ್ತೇವೆ ಅಂತಾ ಈ ಮುಂಚೆಯೇ ಹೇಳಿದ್ದೇವೆ. ಅದನ್ನು ಪಕ್ಷ ತೀರ್ಮಾನ ಮಾಡಬೇಕು. ಇನ್ನು ಯತೀಂದ್ರ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಕಾಕತಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಯಾರು ನಾಯಕತ್ವ ವಹಿಸಿಕೊಳ್ಳಬೇಕು ಅಂತಾ ಪಕ್ಷ, ಶಾಸಕರು ನಿರ್ಧಾರ ಮಾಡಬೇಕು. ಎಲ್ಲರನ್ನೂ ಜೊತೆಗೆ ಒಯ್ಯುವ ಪ್ರಯತ್ನ ಮಾಡುತ್ತಿದ್ದೇವೆ ಅಂತಿಮವಾಗಿ ಪಕ್ಷವೆ ನಿರ್ಧಾರ ಮಾಡಬೇಕು ಎಂದರು.

ಅಹಿಂದ ನಾಯಕತ್ವ ಇದ್ದೇ ಇದೆ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಹಿಂದೆಯೂ ಇದೆ. ಇವತ್ತೂ ಇದೆ. ನಾಳೆಯೂ ಕೂಡ ಇದ್ದೇ ಇರುತ್ತದೆ. ಅಹಿಂದ ನಾಯಕತ್ವ ಇಲ್ಲದೇ ರಾಜಕಾರಣ ಮಾಡಲು ಆಗುವುದಿಲ್ಲ‌‌‌. ಎಲ್ಲವನ್ನೂ ಇವತ್ತೆ ಜೋಡಿಸಲು ಆಗಲ್ಲ. ಅದಕ್ಕಾಗಿ ಕಾಯಬೇಕಾಗುತ್ತದೆ ಎಂದು ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಅವರು ಇದರಲ್ಲಿ ಪ್ರಮುಖ ಮಾತ್ರ ವಹಿಸಬೇಕಾಗುತ್ತದೆ ಎಂಬುದಕ್ಕೆ ಎಲ್ಲವನ್ನೂ ಇಂದು ಕಾಕತಿಯಲ್ಲಿ ತೀರ್ಮಾನಿಸಲು ಆಗಲ್ಲ‌‌. ಇನ್ನೂ 30 ತಿಂಗಳು ಇದೆ. ನಂತರ ಏನೇನು ಬೆಳವಣಿಗೆ ಆಗುತ್ತದೆ‌?. ಪಕ್ಷ, ಶಾಸಕರು, ಆಗಿನ ವಾತಾವರಣದ ಮೇಲೆ ನಿರ್ಧಾರ ಆಗುತ್ತದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಯತೀಂದ್ರ ಅವರದ್ದು ವೈಯಕ್ತಿಕ ಅಭಿಪ್ರಾಯ ಅಂತಾ ನಾನು ಈಗಾಗಲೇ ಹೇಳಿದ್ದೇನೆ. ಎಲ್ಲರೂ ತಮ್ಮ ಅಭಿಪ್ರಾಯ ತಿಳಿಸಲು ಅಧಿಕಾರ ಇದೆ. ಮತ್ತು ಸ್ವತಂತ್ರರಾಗಿದ್ದಾರೆ. ಹಾಗಾಗಿ, ಹೇಳಿದ್ದಾರೆ ಅಷ್ಟೇ. ಮಂದೆ ಏನಾಗುತ್ತದೆ ಅಂತಾ ನೋಡೋಣ ಎಂದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದರು.

ಸಂಚಲನ ಮೂಡಿಸಿದ ಯತೀಂದ್ರ ಹೇಳಿಕೆ: ಬುಧವಾರ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯತೀಂದ್ರ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ‘

ನಮ್ಮ ತಂದೆ ರಾಜಕೀಯದ ಕೊನೆಯ ಘಟ್ಟದಲ್ಲಿದ್ದಾರೆ. 2028ರ ಚುನಾವಣೆಯಲ್ಲಿ ನಮ್ಮ ತಂದೆಯವರು ಸ್ಪರ್ಧಿಸಲ್ಲ. ಜಾತ್ಯತೀತ ಕಾಂಗ್ರೆಸ್ ಸಿದ್ದಾಂತ ಇಟ್ಟುಕೊಂಡ ಎಷ್ಟೋ ಜ‌ನ ರಾಜಕಾರಣಿಗಳಿದ್ದಾರೆ. ಅವರೆಲ್ಲರನ್ನೂ ಸತೀಶ್ ಜಾರಕಿಹೊಳಿ‌ ಮುನ್ನಡೆಸಲಿ. ಸಿದ್ದರಾಮಯ್ಯ ಹೊರತುಪಡಿಸಿದರೆ ಅವರ ಸ್ಥಾನ ತುಂಬುವ ಶಕ್ತಿ ಸತೀಶ್​ ಜಾರಕಿಹೊಳಿ‌ಗೆ ಖಂಡಿತವಾಗಿಯೂ ಇದೆ’ ಎಂದು ಯತೀಂದ್ರ ಹೇಳಿದ್ದರು.
ತಂದೆಯವರು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡವರು. ಅದೇ ಸಿದ್ದಾಂತದಲ್ಲಿ ಸತೀಶ್​ ಜಾರಕಿಹೊಳಿ‌ಯವರು ಕೂಡಾ ನಂಬಿಕೆ ಇಟ್ಟುಕೊಂಡು ಹೋಗುತ್ತಿದ್ದಾರೆ. ಹಾಗಾಗಿ, 2028ರ ನಂತರ ಆ ರೀತಿ ಲೀಡ್ ಮಾಡೋರು ಬೇಕು. ಸೈದ್ಧಾಂತಿಕ ರಾಜಕಾರಣ ಮಾಡುವುದರಲ್ಲಿ ಸತೀಶ್ ಜಾರಕಿಹೊಳಿ‌ ಕೂಡ ಒಬ್ಬರು ಎಂದು ಯತೀಂದ್ರ ಹೊಗಳಿದ್ದರು.

ಬಳಿಕ ಸ್ಪಷ್ಟೀಕರಣ ನೀಡಿರುವ ಯತೀಂದ್ರ, ‘ನಾನು ರಾಜಕೀಯ ಉತ್ತರಾಧಿಕಾರಿ ಬಗ್ಗೆ ಮಾತನಾಡಿಲ್ಲ. ಆದರೆ ಆ ರೀತಿ ಸೈದ್ಧಾಂತಿಕವಾಗಿ ರಾಜಕಾರಣ ಮಾಡುವವರು ಲೀಡ್ ಮಾಡಲಿ ಎನ್ನುವ ಉದ್ದೇಶದಿಂದ ಹೇಳಿದ್ದೇನೆ’ ಎಂದಿದ್ದರು.

ಸಿಎಂ ಆಗುವ ಅರ್ಹತೆ ಇದ್ದವರು ಅನೇಕ ನಾಯಕರು ಇದ್ದಾರೆ. ಎಲ್ಲ ಶಾಸಕರು ಮತ್ತು ಹೈಕಮಾಂಡ್ ಅದನ್ನು ತೀರ್ಮಾನ ಮಾಡುತ್ತಾರೆ. ಸದ್ಯಕ್ಕೆ ಸಿಎಂ ಬದಲಾವಣೆ ಚರ್ಚೆ ಇಲ್ಲ. ಸಿದ್ದರಾಮಯ್ಯ ಹೊರತುಪಡಿಸಿದರೆ ಅವರ ಸ್ಥಾನ ತುಂಬುವ ಶಕ್ತಿ ಸತೀಶ್ ಜಾರಕಿಹೊಳಿ‌ ಅವರಿಗೆ ಖಂಡಿತವಾಗಿಯೂ ಇದೆ ಎಂದು ಬುಧವಾರ ತಿಳಿಸಿದ್ದಾರೆ.