ಡೈಲಿ ವಾರ್ತೆ: 28/ಅ./2025

ಅಂಕೋಲಾ| ವಿದ್ಯಾರ್ಥಿನಿಗೆ ಉಪನ್ಯಾಸಕನಿಂದಲೇ ಲೈಂಗಿಕ ದೌರ್ಜನ್ಯ: ಪೋಷಕರಿಂದ ಕಾಲೇಜಿಗೆ ಮುತ್ತಿಗೆ, ಶೀಘ್ರ ಆರೋಪಿ ಬಂಧನಕ್ಕೆ ಪಿಐ, ತಹಸೀಲ್ದಾರ್ ಅವರಿಗೆ ಮನವಿ

ವಿದ್ಯಾಧರ ಮೊರಬಾ

ಅಂಕೋಲಾ: ತಾಲೂಕಿನ ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ತಕ್ಷಣ ಆತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ವಿವಿಧ ಮೀನುಗಾರಿಕಾ ಸಂಘಟನೆಯವರು ಮಂಗಳವಾರ ತಹಸೀಲ್ದಾರ ಡಾ. ಚಿಕ್ಕಪ್ಪ ನಾಯಕ, ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಂಜೇಶ್ವರ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ಉಪನ್ಯಾಸಕ ರಾಮಚಂದ್ರ ಅಂಕೋಲೆಕರ ಈತನು ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಹಿಂಸೆ ನೀಡುತ್ತಿರುವುದು, ಅವಳೊಂದಿಗೆ ಅನುಚಿತವಾಗಿ ವರ್ತಿಸುವುದು, ದೈಹಿಕ ಕಿರುಕುಳ ನೀಡುವುದು ಹಾಗೂ ಪ್ರೀತಿ ಮಾಡು ಎಂದು ಹಿಂಬಾಲಿಸಿ ಕಿರುಕುಳ ನೀಡುವುದು ಮತ್ತು ವಿಷಯ ಪ್ರಾಚಾರ್ಯೆ ಡಾ. ವಿಜಯ ಪಾಟೀಲ ಗಮನಕ್ಕೆ ತಂದರೂ ಕೂಡ ಆರೋಪಿತರನ್ನು ಸಮರ್ಥಿಸಿ ಬೇಜವಬ್ದಾರಿ ಉತ್ತರ ನೀಡಿ ವಿದ್ಯಾರ್ಥಿನಿಯ ಪೋಷಕರಿಗೆ ಹಾರಿಕೆಯ ಉತ್ತರ ನೀಡಿದ್ದಾಳೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಮೋದ ಬಾನಾವಳಿಕರ, ಮಾದೇವ ಗೌಡ, ಸುಂದರ ಖಾರ್ವಿ, ಧೀರಜ ಬಾನಾವಳಿಕರ, ಮಧುಕೇಶ್ವರ ದೇವರಬಾವಿ, ಮಾಬು ವಿ.ನಾಯ್ಕ, ರಾಜು ಹರಿಕಂತ್ರ ಕಣಗಿಲ್, ಸಂತೋಷ ನಾಯ್ಕ, ವಿಕಾಸ ಖಾರ್ವಿ, ರೋಷನ್ ನದಿಭಾಗ, ಅರವಿಂದ ಕುಡ್ತಳಕರ, ಸಂಜಯ ಬಲೆಗಾರ, ಮಂಜುಳಾ ನಾಯ್ಕ, ಲಕ್ಷ್ಮೀ ಮೊದಲದವರು ಭಾಗಿಯಾಗಿದ್ದರು.