ಡೈಲಿ ವಾರ್ತೆ: 28/ಅ./2025

ಬೆಳಗಾವಿ| ಪ್ರೇಯಸಿಯೊಂದಿಗೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಪತಿರಾಯ – ರೂಮ್ ನಿಂದ ಹೊರ ಎಳತಂದು ಚಪ್ಪಲಿಯಿಂದ ಬಾರಿಸಿದ ಪತ್ನಿ!

ಬೆಳಗಾವಿ: ಪರಸ್ತ್ರೀಯೊಡನೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಗಂಡನನ್ನು ಮಹಿಳೆಯೊಬ್ಬಳು ನಡು ರಸ್ತೆಯಲ್ಲಿ ಸತತವಾಗಿ ಚಪ್ಪಲಿಯಿಂದ ಬಾರಿಸಿರುವ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.

ಸತತವಾಗಿ 150 ಕ್ಕೂ ಹೆಚ್ಚು ಬಾರಿ ಹೆಂಡತಿ ದಣಿವರಿಯದೇ ಚಪ್ಪಲಿಯಿಂದ ಬಾರಿಸಿದ್ದು, ಹೆಂಡತಿಯ ರೌದ್ರಪ್ರದರ್ಶನಕ್ಕೆ ಚಪ್ಪಲಿಯೇ ಕಿತ್ತು ಹೋಗಿದೆ.

ಅವಿನಾಶ ಭೋಸಲೆ ಎಂಬಾತ ಮದುವೆಯಾಗಿ ಹಲವು ವರ್ಷಗಳಾಗಿದ್ದರೂ ಹಗ್ಗ ಕಡಿಯುವ ಚಾಳಿ ಮುಂದುವರೆಸಿದ್ದ. ಈ ಬಗ್ಗೆ ಪತ್ನಿಗೆ ಸುಳಿವು ಸಿಕ್ಕಿತ್ತು. ಬಲ್ಲ ಮೂಲಗಳಿಂದ ಖಚಿತ ಮಾಹಿತಿ ಪಡೆದ ಪತ್ನಿ ಏಕಾಏಕಿ ಚಿಕ್ಕೋಡಿ ಬಸ್‌ ಸ್ಟಾಂಡ್‌ ಬಳಿಯಿರುವ ಲಾಡ್ಜ್‌ ಗೆ ತನ್ನ ತಂದೆಯೊಡನೆ ದಾಳಿ ನಡೆಸಿದ್ದಳು. ಅಲ್ಲಿ ತನ್ನ ಪತಿ ಪ್ರೇಯಸಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕ ಬಿದ್ದಾಗ, ರೋಷಾವೇಷದಿಂದ ಕುದ್ದು ಹೋಗಿದ್ದಳು. ದರದರನೇ ಆತನನ್ನು ರಸ್ತೆಗೆ ಎಳೆತಂದು ಚಪ್ಪಲಿಯಿಂದ ಬಾರಿಸಲು ಮುಂದಾಗಿದ್ದಳು. ಈ ಕೃತ್ಯಕ್ಕೆ ಅವಿನಾಶ್‌ ಭೋಸಲೆ ಮಾವನೂ ಸಹ ನೈತಿಕ ಬೆಂಬಲ ನೀಡಿದ್ದಲ್ಲದೇ ತಾನೂ ಸಹ ಎರಡು ಬಾರಿಸಿದ್ದ.

ಚಿಕ್ಕೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ.