ಡೈಲಿ ವಾರ್ತೆ: 29/ಅ./2025

ಬೆಳ್ತಂಗಡಿ| ಅಕ್ರಮ ಗೋಮಾಂಸ ಶೆಡ್ ಗೆ ಪೊಲೀಸ್ ದಾಳಿ – ಇಬ್ಬರ ಬಂಧನ

ಬೆಳ್ತಂಗಡಿ: ದನಗಳನ್ನು ಕಳವು ಮಾಡಿಕೊಂಡು ಬಂದು ಗೋಮಾಂಸ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ದನದ ಮಾಂಸ ಮತ್ತು ಪರಿಕರಗಳನ್ನು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಚರ್ಚ್ ಬಳಿಯ ನಡೆದಿದೆ.

ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ನಿವಾಸಿ ಅಬ್ದುಲ್ ನಝೀರ್ ಮತ್ತು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಝಕಾರಿಯಾ ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಚರ್ಚ್ ಬಳಿಯ ಖಾಸಗಿ ರಬ್ಬರ್ ತೋಟದ ಶೆಡ್ ಒಳಗಡೆ ಅಕ್ರಮವಾಗಿ ಜಾನುವಾರು ಕಡಿದು ಮಾಂಸ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸೋಮವಾರ ಮಧ್ಯಾಹ್ನ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ದಾಳಿ ವೇಳೆ 91 ಕೆ.ಜಿ ದನದ ಮಾಂಸ ಹಾಗೂ ಪರಿಕರಗಳನ್ನು ವಶಪಡಿಸಿಕೊಂಡಿದ್ದು ಗೋಮಾಂಸ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.