ಡೈಲಿ ವಾರ್ತೆ: 31/ಅ./2025

ಮಗಳ ಶವ ಪರೀಕ್ಷೆಗೆ ಲಂಚ ವಸೂಲಿ: ಕಣ್ಣೀರಿಟ್ಟ ಮಾಜಿ ಸಿಎಫ್‌ಒ – ಎಸ್‌ಐ, ಕಾನ್ಸ್ಟೇಬಲ್ ಅಮಾನತು!

ಬೆಂಗಳೂರು: ಮೃತ ಮಗಳ ಶವ ಪರೀಕ್ಷೆ ಮಾಡಿಸಲು ಹಣ ವಸೂಲಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಗಳ ಸಾವಿನ ನೋವಿನಲ್ಲಿದ್ದ ತಂದೆಗೆ ಲಂಚದ ಕಾಟ ಕೊಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ.
ಅಕ್ಷಯ ಎಂಬ ಯುವತಿ ಮಿದುಳು ರಕ್ತಸ್ರಾವದಿಂದ ಮೃತಪಟ್ಟಿದ್ದರು. ಮಗಳ ಸಾವಿನ ವಿಚಾರ ತಿಳಿದು ತಂದೆ-ತಾಯಿ ಮುಂಬೈನಿಂದ ಬಂದಿದ್ದರು. ಶವ ಪರೀಕ್ಷೆ ಮಾಡಲು ಲಂಚ ಸ್ವೀಕರಿಸಲಾಗಿದೆ. ಇದರಿಂದ ಬೇಸತ್ತು ಯುವತಿ ತಂದೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪುತ್ರಿ ಸಾವಿನ ಶೋಕದಲ್ಲಿದ್ದ 64 ವಯಸ್ಸಿನ ತಂದೆ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.

ಪ್ರಕರಣ ಏನು?
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಿವೃತ್ತ ಸಿಎಫ್‌ಒ ಶಿವಕುಮಾರ್ ಅವರ ಮಗಳು ಅಕ್ಷಯ ಸೆ.18 ರಂದು ಮಿದುಳು ರಕ್ತಸ್ರಾವದಿಂದ ಮೃತಪಟ್ಟಿದ್ದರು. ಮಗಳ ಸಾವಿನ ವಿಚಾರ ತಿಳಿದು ತಂದೆ-ತಾಯಿ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಶವ ಸಾಗಿಸಲು ಅಂಬುಲೆನ್ಸ್ ಚಾಲಕ ನಿಗದಿತ 5 ಸಾವಿರಕ್ಕಿಂತ 2,000 ರೂ. ಹೆಚ್ಚುವರಿ ಹಣ ಪಡೆದಿದ್ದ. ಕಸುವಿನಹಳ್ಳಿಯಿಂದ ಕೋರಮಂಗಲ ಆಸ್ಪತ್ರೆಗೆ ಶವ ಸಾಗಿಸಲು 5 ಸಾವಿರ ರೂ.. ನಂತರ ಮರಣೋತ್ತರ ಪರೀಕ್ಷೆ ವೇಳೆ ಪೊಲೀಸರು ಹಣಕ್ಕಾಗಿ ಒರಟಾಗಿ ವರ್ತಿಸಿದ್ದಾರೆ. ಆದರೆ, ಶಿವಕುಮಾರ್ ಸ್ನೇಹಿತ ಮಧ್ಯಪ್ರವೇಶಿಸಿದಾಗ ಪೊಲೀಸರು ಸುಮ್ಮನಾಗಿದ್ದಾರೆ ಎನ್ನಲಾಗಿದೆ.

ಮಗಳ ಕಣ್ಣುಗಳನ್ನ ದಾನ ಮಾಡಿ ಸ್ಮಶಾನದಲ್ಲೂ ಶಿವಕುಮಾರ್ ಹಣ ನೀಡಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸ್ ಠಾಣೆಗೆ ಹೋಗಿದ್ರು. ಈ ವೇಳೆ ಠಾಣೆಯಲ್ಲೇ UDR ಕಾಪಿ ಪಡೆಯಲು ಕೂಡ 5 ಸಾವಿರ ರೂ. ಲಂಚ ಪಡೆದಿದ್ದಾರೆ. ಬಳಿಕ ಮರಣ ಪ್ರಮಾಣ ಪತ್ರ ಪಡೆಯಲು ಸಮೀಕ್ಷೆ ಇದ್ದ ಕಾರಣ 2 ಸಾವಿರ ಲಂಚ ಕೊಟ್ಟಿದ್ದಾರೆ. ಈ ಎಲ್ಲಾ ವಿಚಾರಗಳಿಂದ ಬೇಸತ್ತು ಸೋಷಿಯಲ್ ಮೀಡಿಯಾದಲ್ಲಿ ಶಿವಕುಮಾರ್ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.

ನನ್ನಲ್ಲಿ ಹಣವಿತ್ತು. ಹಾಗಾಗಿ ನಾನು ಹಣ ಪಾವತಿಸಿದೆ. ಆದರೆ ಬಡವರು ಏನು ಮಾಡುತ್ತಾರೆ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ. ಅಂಬುಲೆನ್ಸ್ ಚಾಲಕ, ಪೊಲೀಸ್, ಸ್ಮಶಾನ ಸಿಬ್ಬಂದಿ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಪ್ರತಿ ಹಂತದಲ್ಲೂ ಲಂಚ ನೀಡಿರುವ ಆರೋಪ ಮಾಡಿದ್ದಾರೆ. ಇದಾದ ಕೆಲ ಹೊತ್ತಲ್ಲಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಶಿವಕುಮಾರ್ ಪೋಸ್ಟ್, ಆರೋಪ ಹಿನ್ನೆಲೆ ಪೊಲೀಸರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ. ಹಣ ಪಡೆದಿರುವುದು ತನಿಖೆಯಲ್ಲಿ ಖಾತರಿಯಾಗಿದೆ. ಹೀಗಾಗಿ, ಸಬ್ ಇನ್ಸ್ಪೆಕ್ಟರ್ ಸಂತೋಷ್, ಕಾನ್ಸ್ಟೇಬಲ್ ಗೋರಕ್ ನಾಥ್ ಅವರನ್ನು ಅಮಾನತು ಮಾಡಿ ವೈಟ್‌ಫೀಲ್ಡ್ ಡಿಸಿಪಿ ಪರಶುರಾಮ್ ಆದೇಶ ಹೊರಡಿಸಿದ್ದಾರೆ.