ಡೈಲಿ ವಾರ್ತೆ: 05/NOV/2025

ಪತಿ ಸಾವಿನ ಸುದ್ದಿ ಕೇಳಿ ಪತ್ನಿಗೂ ಹಾರ್ಟ್​ಅಟ್ಯಾಕ್: ಸಾವಿನಲ್ಲೂ ಒಂದಾದ ದಂಪತಿ

ಬಾಗಲಕೋಟೆ: ಬಾಗಲಕೋಟೆ ‌ಜಿಲ್ಲೆಯ ಬೀಳಗಿಯಲ್ಲಿ ದಂಪತಿಗಳಿಬ್ಬರ ಸಾವು ಇಡೀ ಊರನ್ನೇ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ತುಳಸಿ ಪೂಜೆ ಮುಗಿಸಿ ಖುಷಿಯಿಂದಲೇ ಇದ್ದ ಪತಿಗೆ ಅಚಾನಕ್ಕಾಗಿ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಗಂಡನ ಸಾವಿನ ಸುದ್ದಿ ಕೇಳಿದ ಹೆಂಡತಿಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದು, ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.

ಮೃತ ಶಶಿಧರ್ ಪತ್ತಾರ(40) ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಶಶಿಧರ್, ಪತ್ನಿ ಸರೋಜಿನಿಯ (35) ಜೊತೆ ತುಳಸಿ ಪೂಜೆ ಮಾಡಿ ಮನೆಯಲ್ಲಿ ಖುಷಿಯಲ್ಲೇ ಕಾಲ ಕಳೆದಿದ್ದರು. ಆನಂತರ ಶಶಿಧರ್​ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಸಮಸ್ಯೆಯನ್ನು ನಿರ್ಲಕ್ಷಿಸದೆ ಕೂಡಲೆ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಮಾರ್ಗ ಮಧ್ಯದಲ್ಲಿಯೇ ಶಶಿಧರ್ ಉಸಿರು ಚೆಲ್ಲಿದ್ದಾರೆ. ಪತಿಯು ಮೃತಪಟ್ಟಿರುವ ವಿಷಯ ತಿಳಿಯದ ಪತ್ನಿ ಸರೋಜಿನಿ ಗಂಡನನ್ನು ನೋಡಲು ಆಸ್ಪತ್ರೆಗೆ ಬಂದಾಗ ಶವ ಕಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಪತಿ ಮೃತದೇಹದ ಎದುರೇ ಹಾರ್ಟ್​ಅಟ್ಯಾಕ್ ಆಗಿ ಪ್ರಾಣ ಬಿಟ್ಟಿದ್ದಾರೆ.

ತುಳಸಿ ಪೂಜೆಯಂದೇ ಮೃತಪಟ್ಟಿರುವ ಸಹೋದರಿಯರು
ಶಶಿಧರ್ ಪತ್ತಾರ್ ಮತ್ತು ಸರೋಜಿನಿ ದಂಪತಿಗಳು ಕಳೆದು 15 ವರ್ಷಗಳಿಂದ ಸಂಸಾರ ನಡೆಸುತ್ತಿದ್ದರು. ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದು, ಇದೀಗ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಮೃತ ಸರೋಜಿನಿಗೆ ನಾಲ್ವರು ಸಹೋದರಿಯರಿದ್ದು, ಮೂವರು ಈಗಾಗಲೇ ಮೂತಪಟ್ಟಿದ್ದಾರೆ. ಸರೋಜಿನಿಯೂ ಸೇರಿ ಉಳಿದ ಮೂರೂ ಸಹೋದರಿಯರು ತುಳಸಿ ಪೂಜೆಯ ಸಂದರ್ಭದಲ್ಲಿಯೇ ಮೃತಪಟ್ಟಿರುವುದು ಆಶ್ಚರ್ಯಕರ ಸಂಗತಿಯಾಗಿದೆ.