ಡೈಲಿ ವಾರ್ತೆ: 05/NOV/2025

ಭಟ್ಕಳ | ಖಾಸಗಿ ಬಸ್ಸಿನಲ್ಲಿ ಸ್ವೀಟ್ ಬಾಕ್ಸ್ ಮಾದರಿಯಲ್ಲಿ ಹಣ, ಚಿನ್ನ ಸಾಗಾಟ: 32 ಚಿನ್ನದ ಬಳೆ, 50 ಲಕ್ಷ ರೂ ಜಪ್ತಿ

ಭಟ್ಕಳ: ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಸಾಗಿಸುತ್ತಿದ್ದ 401 ಗ್ರಾಂ ತೂಕದ 32 ಚಿನ್ನದ ಬಳೆ ಹಾಗೂ 50 ಲಕ್ಷ ರೂ ನಗದು ಹಣವನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಭಟ್ಕಳದಲ್ಲಿ ತಪಾಸಣೆ ಮಾಡಿದಾಗ ಸೂಟ್‌ಕೇಸ್‌ನಲ್ಲಿ ಚಿನ್ನ ಮತ್ತು ನಗದು ಪತ್ತೆ ಆಗಿದೆ. ಸದ್ಯ ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸೂಟ್‌ಕೇಸ್ ನೀಡಿದ್ದ ಅನಾಮಿಕ ವ್ಯಕ್ತಿ:
ಮುಂಬೈನಲ್ಲಿ ಬಸ್‌ ಚಾಲಕನ ಕೈಗೆ ಅನಾಮಿಕ ವ್ಯಕ್ತಿ ಸೂಟ್‌ಕೇಸ್ ನೀಡಿದ್ದಾನೆ. ಮಂಗಳೂರು ಬಸ್ ನಿಲ್ದಾಣದಲ್ಲಿ ಸೂಟ್‌ಕೇಸ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದ. ಬಸ್ ಸಂಖ್ಯೆ ಹೇಳುತ್ತೇನೆ, ನಮ್ಮವರು ಬಂದು ಪಡೆಯುತ್ತಾರೆ. ಇರ್ಫಾನ್ ಎಂಬುವವರಿಗೆ ಸೂಟ್‌ಕೇಸ್ ಕೊಡುವಂತೆ ಹೇಳಿದ್ದ.

ಸಂಶಯಾಸ್ಪದ ಹಿನ್ನೆಲೆ ಭಟ್ಕಳದಲ್ಲಿ ಬಸ್ ಸರ್ಚ್ ಮಾಡಿದಾಗ ಪೊಲೀಸರ ಕಣ್ಣಿಗೆ ಸೂಟ್‌ಕೇಸ್‌ನಲ್ಲಿ ಸ್ವೀಟ್ ಬಾಕ್ಸ್ ಮಾದರಿಯಲ್ಲಿ ಕಂಡಿದ್ದು, ಅದನ್ನು ಓಪನ್​ ಮಾಡಿದಾಗ ಹಣ, ಒಡವೆ ಪತ್ತೆ ಆಗಿವೆ. ಸದ್ಯ ಬಸ್ ಚಾಲಕನಿಂದ ನಗದು ಮತ್ತು ಚಿನ್ನ ವಶಕ್ಕ ಪಡೆದಿರುವ ಪೊಲೀಸರು, ಮಾಲೀಕರ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.