
ಡೈಲಿ ವಾರ್ತೆ: 06/NOV/2025
ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರ: ನಮ್ಮದು ರೈತರ ಪರವಾದ ಸರ್ಕಾರ, ರೈತರ ಪ್ರತಿಭಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ – ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಗುರುವಾರ 8ನೇ ದಿನಕ್ಕೆ ಕಾಲಿಟ್ಟಿದೆ.
ಈ ಮಧ್ಯೆ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ಬಗ್ಗೆ ಸುದೀರ್ಘವಾಗಿ ಚರ್ಚೆ ಆಗಿದೆ. ಸಂಪುಟ ಸಭೆಗೂ ಮೊದಲು ಎಂಬಿ ಪಾಟೀಲ್ ಹಾಗೂ ಎಚ್ ಕೆ ಪಾಟೀಲ್ ಅವರಿಗೆ ರೈತರ ಜೊತೆಗೆ ಮಾತುಕತೆ ನಡೆಸಲು ಸೂಚಿಸಿದ್ದೆ. ಇಬ್ಬರು ಹೋಗಿ ಮಾತುಕತೆ ನಡೆಸಿದ್ದಾರೆ” ಎಂದು ವಿವರಿಸಿದರು.
ನಮ್ಮದು ರೈತರ ಪರವಾದ ಸರ್ಕಾರ. ಹೀಗಾಗಿ ರೈತರ ಪ್ರತಿಭಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದರಿಂದ ಅವರು ಪ್ರತಿಭಟನಾ ಸ್ಥಳಕ್ಕೆ ಹೋಗಿಲ್ಲ. ಬದಲಾಗಿ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಅವರು ಸ್ಥಳಕ್ಕೆ ಹೋಗಿ ರೈತರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದರು.
ಕಬ್ಬಿಗೆ ಎಫ್ ಆರ್ ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಈ ವರ್ಷವೂ ಕಳೆದ ಮೇ 6 ರಂದು ಎಫ್ ಆರ್ ಪಿ ನಿಗದಿ ಮಾಡಲಾಗಿದೆ. 25-26 ನೇ ಸಾಲಿನಲ್ಲಿ 10.25 ಇಳುವರಿಗೆ 3550 ಪ್ರತಿ ಟನ್ ಗೆ ನಿಗದಿ ಮಾಡಲಾಗಿದೆ. ಇದರಲ್ಲಿ ಸಾರಿಗೆ, ಕಟಾವು ಒಳಗೊಂಡಿದೆ. ಇಳುವರಿ 9.5 ಕ್ಕಿಂತ ಕಡಿಮೆ ಇದ್ದರೆ 3290.50 ಕೊಡಬೇಕು ಎಂದು ಕೇಂದ್ರ ತೀರ್ಮಾನ ಮಾಡಿದೆ ಎಂದು ವಿವರ ನೀಡಿದರು.