ಡೈಲಿ ವಾರ್ತೆ: 07/NOV/2025

ಮಣಿಪಾಲ: ಅಪ್ರಾಪ್ತ ಬಾಲಕಿ ಜೊತೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡನ ಪುತ್ರ

ಉಡುಪಿ: ಅಪ್ರಾಪ್ತ ಬಾಲಕಿಯ ಜೊತೆ ಯುವಕನೋರ್ವ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಕಟಪಾಡಿಯ ಬಿಜೆಪಿ ಮುಖಂಡನ ಪುತ್ರ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ.

ಕಟಪಾಡಿ ಮಣಿಪುರದ ನಿವಾಸಿ ಶ್ರೀಶಾಂತ್ ಪೂಜಾರಿ (20) ಎಂಬಾತ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಮಣಿಪಾಲದ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ.

ಇದರ ಮಾಹಿತಿ ತಿಳಿದು ಬಾಲಕಿಯ ಪೋಷಕರು ನೇರವಾಗಿ ಲಾಡ್ಜ್‌ಗೆ ಪೊಲೀಸರೊಂದಿಗೆ ದಾಳಿ ಮಾಡಿದ್ದಾರೆ. ಬಾಲಕಿಯ ನಕಲಿ ಆಧಾರ್ ಕಾರ್ಡ್ ನೀಡಿ ಕರೆದುಕೊಂಡು ಹೋಗಿದ್ದು, ಆತನ ವಿರುದ್ಧ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಇನ್ನೋರ್ವ ಬಾಲಕಿ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.

ನನಗೂ ಶ್ರೀಶಾಂತ್ ಮದುವೆ ಆಗುವುದಾಗಿ ನಂಬಿಸಿ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.