ಡೈಲಿ ವಾರ್ತೆ: 07/NOV/2025

ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ – ಹತ್ತರಗಿ ಟೋಲ್ ಗೇಟ್ ಬಳಿ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ!

ಬೆಳಗಾವಿ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ಮಾಡುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ.

ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿಗೆ ಆಗ್ರಹಿಸಿ ರೈತರು ರಾಷ್ಟ್ರೀಯ‌ ಹೆದ್ದಾರಿ ತಡೆದು ಪ್ರತಿಭಟಿಸುವಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಈ ವೇಳೆ ರೈತರನ್ನು ಹೊರತು ಪಡಿಸಿ ಕೆಲ ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ವಾಗ್ವಾದ, ನೂಕಾಟ, ತಳ್ಳಾಟ ಶುರುವಾಗಿದ್ದು ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುತ್ತಿದ್ದಂತೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ, ಹಲವು ಪೊಲೀಸರಿಗೆ ಕಲ್ಲು ತಾಗಿ ಗಾಯವಾಗಿದೆ. ಸಾರಿಗೆ ಬಸ್, ಲಾರಿ ಸೇರಿ ಐದಕ್ಕೂ ಅಧಿಕ ವಾಹನಗಳಿಗೆ ಕಲ್ಲು ತೂರಿದ ಪರಿಣಾಮ ಆ ವಾಹನಗಳ ಗಾಜು ಪುಡಿ ಪುಡಿ ಆಗಿವೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಭೇಟಿ ನೀಡಿದ್ದು, ರೈತ ಮುಖಂಡರೊಂದಿಗೆ ಮಾತನಾಡಿ ಅವರನ್ನು ಮನವಲಿಸಲು ಪ್ರಯತ್ನಿಸಿದರು. ಈ ವೇಳೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಚೂನಪ್ಪ ಪೂಜಾರಿ ಸೇರಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಹತ್ತರಗಿ ಟೋಲ್ ಗೇಟ್ ಬಳಿ ಕಲ್ಲು ತೂರಾಟ – ಇದು ಕಿಡಿಗೇಡಿಗಳ ಕೆಲಸ ಎಂದ ಶಶಿಕಾಂತ ಗುರೂಜಿ:
ಕಲ್ಲು ತೂರಾಟ ನಮ್ಮ ರೈತರು ಮಾಡಿಲ್ಲ, ಯಾರೋ ಕಿಡಿಗೇಡಿಗಳು ಮಾಡಿರಬಹುದು. ಕಲ್ಲು ತೂರಾಟ ಮಾಡಿದವರನ್ನು ಬಂಧನ ಮಾಡುವಂತೆ ರೈತ ಮುಖಂಡ ಶಶಿಕಾಂತ ಗುರೂಜಿ ಬೆಳಗಾವಿ ಪೊಲೀಸರಿಗೆ ಮನವಿ ಮಾಡಿಕೊಂಡರು.

ಗುರ್ಲಾಪುರ ಗ್ರಾಮದ ಕಬ್ಬು ಬೆಳೆಗಾರರ ಹೋರಾಟ ವೇದಿಕೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹುಕ್ಕೇರಿ ತಾಲೂಕಿನ ಹತ್ತರಕಿ ಟೋಲ್ ಗೇಟ್ ಬಳಿ ನಮ್ಮ ರೈತರು ಶಾಂತ ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದರೆ, ಯಾರೋ ಕಿಡಿಗೇಡಿಗಳು ಪೊಲೀಸರ​ ವಾಹನಕ್ಕೆ ಕಲ್ಲು ತೂರಿದ್ದಾರೆಂದು ಮಾಧ್ಯಮಗಳಿಂದ ಮಾಹಿತಿ ಸಿಕ್ಕಿದೆ. ನಮ್ಮ ರೈತರು ಅಲ್ಲಿಯೇ ಇದ್ದು, ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದ್ದೇನೆ. ನಾವು ಕಳೆದ ಒಂಬತ್ತು ದಿನಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಲಕ್ಷಾಂತರ ಜನ ರೈತರು ಸೇರಿದ್ದಾರೆ. ಇದುವರೆಗೂ ಯಾವುದೇ ಅಹಿತಕರ ಘಟನೆ ಆಗಿಲ್ಲ. ಹಾಗೂ ಸರ್ಕಾರದ ಆಸ್ತಿ ಪಾಸ್ತಿಗೆ ನಾವು ಹಾನಿ ಮಾಡಿಲ್ಲ. ಇದು ಕಿಡಿಗೇಡಿಗಳ ಕೆಲಸ. ಹಾಗಾಗಿ ಪೊಲೀಸರು ಅಂತವರನ್ನು ತಕ್ಷಣವೇ ಬಂಧನ ಮಾಡಬೇಕೆಂದು ಶಶಿಕಾಂತ ಗುರೂಜಿ ಆಗ್ರಹಿಸಿದರು.

ಕಿಡಿಗೇಡಿಗಳನ್ನು ಬಂಧನ ಮಾಡಿ: ನಮ್ಮ ಹೋರಾಟ ರಾಜ್ಯದಲ್ಲಿ ಮಾದರಿಯಾಗಿದೆ. ಇದನ್ನು ಒಡೆಯಲು ಹಲವರು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರ ಪ್ರಯತ್ನ ಯಾವುದೇ ಕಾರಣಕ್ಕೂ ಪ್ರಯೋಜನವಾಗಿಲ್ಲ. ಹಾಗಾಗಿ ವಾಮಮಾರ್ಗದಿಂದ ಈ ಹೋರಾಟಕ್ಕೆ ಕುತ್ತು ತರುವ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿ ಪೊಲೀಸರು ಅಂತಹ ಕಿಡಿಗೇಡಿಗಳನ್ನು ಬಂಧನ ಮಾಡಬೇಕೆಂದು ಆಗ್ರಹಿಸಿದರು.