



ಡೈಲಿ ವಾರ್ತೆ: 07/NOV/2025

ಕಲಬುರಗಿ | ಮನೆಗಳ್ಳತನ ಪ್ರಕರಣ – ಆರೋಪಿ ಅರೆಬಿಕ್ ಶಿಕ್ಷಕನ ಬಂಧನ, ಲಕ್ಷಾಂತರ ರೂ. ಚಿನ್ನಾಭರಣ ವಶಕ್ಕೆ

ಕಲಬುರಗಿ: ಇಲ್ಲಿನ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ 3 ಮನೆಗಳ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ಬೈಕ್ ಸೇರಿದಂತೆ 13.41 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರಗಿಯ ಜಿಲಾನಾಬಾದ್ ಕಾಲೋನಿ ನಿವಾಸಿ ಮಹ್ಮದ್ ಆರೀಫ್ ಅಲಿ(50) ಬಂಧಿತ ಆರೋಪಿ
ಕಲಬುರಗಿ ನಗರದಲ್ಲಿ ಮಸೀದಿಯೊಂದರಲ್ಲಿ ಅರೆಬಿಕ್ ಶಿಕ್ಷಕನಾಗಿ ಆರಿಫ್ ಕೆಲಸ ಮಾಡುತ್ತಿದ್ದ.
ಹಗಲಲ್ಲಿ ಕುರಾನ್ ಬೋಧಕ, ರಾತ್ರಿಯಾಗುತ್ತಿದ್ದಂತೆ ಮನೆ ಕಳ್ಳತನಕ್ಕೆ ಇಳಿಯುತ್ತಿದ್ದ. ಮಧ್ಯಾಹ್ನ ಮತ್ತು ಸಂಜೆ ಕೆಲಸದ ಬಿಡುವಿನ ವೇಳೆ ಬಡಾವಣೆ ಸುತ್ತಾಡಿ, ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದು. ನಸುಕಿನ 3 ಗಂಟೆ ಸುಮಾರಿಗೆ ಎಲ್ಲರೂ ಗಾಢ ನಿದ್ರೆಯಲ್ಲಿರುವಾಗ ಬೀಗ ಹಾಕಿದ ಮನೆಗಳಿಗೆ ಹೋಗಿ ರಾಡ್ ನಿಂದ ಬೀಗ ಮುರಿದು ಮನೆ ದೋಚುತ್ತಿದ್ದ.
ಕಳ್ಳತನ ಮಾಡಿದ್ದ 13.41 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಮ್ ಚಿನ್ನದ ಆಭರಣಗಳು, 16 ಸಾವಿರ ರೂಪಾಯಿ ಮೌಲ್ಯದ 200 ಗ್ರಾಮ ಬೆಳ್ಳಿ, 25 ಸಾವಿರ ರೂಪಾಯಿ ಮೌಲ್ಯದ ಒಂದು ಬೈಕನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕಳವು ಪ್ರಕರಣ ಭೇದಿಸಿದ ಪೊಲೀಸರು:
ಕಲಬುರಗಿಯ ವಿವಿ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಇತ್ತೀಚಿಗೆ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಕಳವು ಪ್ರಕರಣಗಳ ತನಿಖೆಗಿಳಿದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹಗಲು ಮತ್ತು ರಾತ್ರಿ ಹೊತ್ತಲ್ಲಿ ಬಡಾವಣೆ ಒಳಗಡೆ ಆರೀಫ್ ಅಲಿ ಬೈಕ್ ಮೇಲೆ ಸಂಚರಿಸುವ ಸಿಸಿ ಟಿವಿ ದೃಶ್ಯಗಳ ನೋಡಿ ಅನುಮಾನ ಬಂದಿತ್ತು. ನಂತರ ಈತನ ಚಲನ ವಲನಗಳ ಮೇಲೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದರು. ಅನುಮಾನ ದೃಢವಾಗುತ್ತಿದ್ದಂತೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು ಸತ್ಯ ಒಪ್ಪಿಕೊಂಡಿದ್ದಾನೆ.
ಇತ್ತಿಚಿಗೆ ವಿವಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೂರು ಮನೆಗಳ್ಳತನ ಕೃತ್ಯ ಮಾಡಿದ್ದು ತಾನೇ ಎಂದು ಆರಿಫ್ ಆಲಿ ಒಪ್ಪಿಕೊಂಡಿದ್ದಾನೆ. ಮಸೀದಿಯಲ್ಲಿ ಕುರಾನ್ ಬೋಧನೆಯಿಂದ 12 ಸಾವಿರ ಸಂಬಳ ಬರುತ್ತಿದ್ದು ಅದು ಜೀವನ ನಿರ್ವಹಣೆಗೆ ಸಾಲದ್ದಕ್ಕೆ ಈ ಕೆಲಸಕ್ಕೆ ಇಳಿದಿದ್ದಾಗಿ ಹೇಳಿಕೊಂಡಿದ್ದಾನೆ.