



ಡೈಲಿ ವಾರ್ತೆ: 07/NOV/2025

ಪ್ರಸಿದ್ಧ ಛಾಂದಸ ಗಣೇಶ ಕೊಲಕಾಡಿ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

ಪ್ರಸಿದ್ಧ ಛಾಂದಸ ಯಕ್ಷಗಾನ ಕವಿ, ವಿಮರ್ಶಕ, ಪಾರ್ಥಿಸುಬ್ಬ ಪ್ರಶಸ್ತಿ ಪುರಸ್ಕೃತ ಗಣೇಶ ಕೊಲೆಕಾಡಿಯವರು(54) ಇಂದು (07.11.2025) ಸಂಜೆ ಸ್ವಗೃಹದಲ್ಲಿ ನಿಧನರಾದರು.ಅವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿಯ ಸರ್ವ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಅವರು ಪ್ರಸಿದ್ಧ ಹಿಮ್ಮೇಳ ವಾದಕರಾದ ದಿವಾಣ ಭೀಮ ಭಟ್ಟರಲ್ಲಿ ಭಾಗವತಿಕೆ ಮತ್ತು ಮದ್ದಳೆ ವಾದನವನ್ನು ಹಾಗೂ ಛಾಂದಸರಾದ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರಲ್ಲಿ ಯಕ್ಷಗಾನ ಕಾವ್ಯ ರಚನೆಯನ್ನು ಅಭ್ಯಾಸ ಮಾಡಿದ್ದರು. ಸುಮಾರು 50ಕ್ಕಿಂತಲೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದರು. ಯಕ್ಷಗಾನದಲ್ಲಿ ಬಳಕೆಯಾಗಿರುವ ಛಂದಸ್ಸಿನ ವೈಶಿಷ್ಟ್ಯದ ಕುರಿತು ವಿದ್ವತ್‍ಪೂರ್ಣವಾಗಿ ವಿವರಿಸಬಲ್ಲವರಾಗಿದ್ದರು.
ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೊಳಗಾಗಿದ್ದರು. ತಾಯಿಯೊಂದಿಗೆ ಮುಲ್ಕಿ ಬಳಿಯ ಮೈಲೊಟ್ಟು ಎಂಬಲ್ಲಿ ವಾಸಿಸುತ್ತಿದ್ದ ಅವರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಕೊಡಮಾಡುವ “ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ” ಯಕ್ಷಗಾನ ವಿದ್ವಾಂಸ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ ಯಕ್ಷಗಾನ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾಗಿರುವ ಪಾರ್ತಿ ಸುಬ್ಬ ಪ್ರಶಸ್ತಿಗೆ ಗಣೇಶ ಕೊಲಕಾಡಿ ಪಾತ್ರರಾಗಿದ್ದರು. ಮಾತ್ರವಲ್ಲದೆ ಅವರು ನಾಡಿನ ಅನೇಕ ಪ್ರಶಸ್ತಿ ಪುರಸ್ಕಾರಗಳಿಂದ ಮಾನಿತರಾಗಿದ್ದರು.
ಮನೆಯಲ್ಲಿ ಉಚಿತ ಯಕ್ಷಗಾನ ತರಗತಿಯನ್ನು ನಡೆಸಿ ಅಪಾರ ಶಿಷ್ಯ ವರ್ಗವನ್ನು ಹೊಂದಿದ್ದರು. ಗಣೇಶ್ ಕೊಲಕಾಡಿ ನಿಧನದಿಂದ ಯಕ್ಷಗಾನ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿ ಸರ್ವ ಸದಸ್ಯರು ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.