



ಡೈಲಿ ವಾರ್ತೆ: 08/NOV/2025

ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಪದ ಬಳಕೆ: ಬಿಜೆಪಿ ಸಿ.ಟಿ. ರವಿ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ತಿಮ್ಮ ಪೂಜಾರಿ ಖಂಡನೆ

ಕೋಟ: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸವಿತಾ ಸಮಾಜದ ವಿರುದ್ದ ಅವಹೇಳನಕಾರಿ ಪದ ಬಳಸಿದ್ದಾರೆ ಅವರು ತಕ್ಷಣ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ತಿಮ್ಮ ಪೂಜಾರಿ ಅಗ್ರಹಿಸಿದ್ದಾರೆ.

ಶನಿವಾರ ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ
ಅವರು ಮಾತನಾಡಿ ಸವಿತಾ ಸಮಾಜವು ಜಾತಿ ಮತ್ತು ಧರ್ಮ ನೋಡದೆ ಎಲ್ಲರಿಗೂ ಗೌರವಪೂರ್ವಕವಾಗಿ
ಕ್ಷೌರ ಮಾಡುವ ಶ್ರಮಿಕ ವರ್ಗವಾಗಿದೆ.
ಇಂತಹ ಸಮಾಜದ ಮೇಲೆ ಬಿಜೆಪಿಯ ಮಾಜಿ ಸಚಿವ ಸಿ.ಟಿ. ರವಿ ಸಾರ್ವಜನಿಕ ವೇದಿಕೆಯಲ್ಲಿ ನೀಡಿದ ಅಸಮಂಜಸ ಹಾಗೂ ಅವಮಾನಕಾರಿ ಹೇಳಿಕೆ, ಗೌರವಯುತವಾಗಿ ಜೀವನ ಸಾಗಿಸುತ್ತಿರುವ ಸವಿತಾ ಸಮಾಜದ ಗೌರವಕ್ಕೆ ಕಳಂಕ ತಂದಿದೆ. ಕ್ಷೌರಿಕ ವೃತ್ತಿ ಪೌರಾಣಿಕ ಮತ್ತು ಸಾಂಪ್ರದಾಯಿಕ ಪಾರಂಪರ್ಯದ ಭಾಗವಾಗಿದ್ದು, ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಈ ವೃತ್ತಿಯು ದೇವಾಲಯಗಳಲ್ಲಿ, ಸಮಾಜದಲ್ಲಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯಂತ ಪ್ರಾಚೀನ ಹಾಗೂ ಗೌರವನೀಯ ಸೇವೆಯಾಗಿ ಪರಿಗಣಿತವಾಗಿದೆ. ಇಂತಹ ಪವಿತ್ರ ವೃತ್ತಿಯನ್ನು ಹಾಸ್ಯಾಸ್ಪದವಾಗಿ ಚಿತ್ರಿಸುವುದು ಅಸಭ್ಯ, ಅಸಂಸ್ಕೃತ ಹಾಗೂ ನಿಂದನೀಯ ನಡವಳಿಕೆಯಾಗಿದೆ.
ನಾವು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಸಿಟಿ ರವಿಯವರು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವದು ಎಂದು ಹೇಳಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಗೋಪಾಲ್ ಬಂಗೇರ, ಚಂದ್ರ ಪೂಜಾರಿ, ಮಹಾಬಲ ಮಡಿವಾಳ, ಅಚ್ಚುತ ಪೂಜಾರಿ ಕಾರ್ಕಡ, ಶೇಖರ ಮರಕಾಲ, ದಿನೇಶ್ ಬಂಗೇರ, ವಿಜಯ್ ಪೂಜಾರಿ ಉಪಸ್ಥಿತರಿದ್ದರು.