
ಡೈಲಿ ವಾರ್ತೆ: 23/NOV/2025
ಯಡಾಡಿ ಮತ್ಯಾಡಿಯ ಸುಜ್ಞಾನ ಪಿಯು ಕಾಲೇಜು ಮತ್ತು ವಿದ್ಯಾರಣ್ಯ ಶಾಲೆಯಲ್ಲಿ ಸಂಭ್ರಮದ ವಾರ್ಷಿಕೋತ್ಸವ ‘ವರ್ಷಾ 2025’ – ಶಿಕ್ಷಣ ಸಂಸ್ಥೆಗಳು ಬೆಳೆಯುವಲ್ಲಿ ಶಿಕ್ಷಕರ ಜೊತೆಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಪಾತ್ರ ಮುಖ್ಯ – ಶಾಸಕ ಕೊಡ್ಗಿ

ಕುಂದಾಪುರ: ಸುಜ್ಞಾನ ಶಿಕ್ಷಣ ಸಂಸ್ಥೆ ಅತ್ಯಂತ ವೇಗವಾಗಿ ಬೆಳೆದು ನಿಂತಿದೆ. ಈ ಸಂಸ್ಥೆಯ 2ವರ್ಷದ ಬೆಳವಣಿಗೆ ನನಗೆ ಅಚ್ಚರಿ ಮೂಡಿಸಿದೆ. ಯಾವುದೇ ಸಂಸ್ಥೆಗಳು ಸದೃಢವಾಗಬೇಕಾದರೆ ಸಂಘಟನಾತ್ಮಕ ಶ್ರಮ ಅಗತ್ಯ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಅವರು ಶನಿವಾರ ಸಂಜೆ ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ವರ್ಷಾ 2025ನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಬೆಳೆಯುವಲ್ಲಿ ಶಿಕ್ಷಕರ ಜೊತೆಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಪಾತ್ರ ಬಹಳಷ್ಟಿದೆ ಎಂದು ಹೇಳಿದರು.

ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಘಟಪ್ರಭಾ ಜೆಎನ್ಎಸ್ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟರ್ ಜಯಶೀಲ ಎನ್. ಶೆಟ್ಟಿ ಅವರು ಮಾತನಾಡಿ ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆ ಮಾಡಿದ ಕೀರ್ತಿ ಸುಜಾನ್ ಎಜುಕೇಶನ್ ಟ್ರಸ್ಟ್ ನ ವಿದ್ಯಾ ಸಂಸ್ಥೆಗೆ ಸಲ್ಲುತ್ತದೆ.

ಕಾರಣ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಉತ್ತಮವಾಗಿ ಸಿದ್ಧಪಡಿಸಲು ಈ ಗ್ರಾಮೀಣ ಭಾಗದಲ್ಲಿ ಸುಜ್ಞಾನ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿರುವುದು ಈ ಸಂಸ್ಥೆಯ ರಮೇಶ್ ಶೆಟ್ಟಿ, ಭರತ್ ಶೆಟ್ಟಿ ಹಾಗೂ ಪ್ರತಾಪ್ ಶೆಟ್ಟಿ ಇವರ ಪರಿಶ್ರಮವಾಗಿದೆ ಎಂದರು. ಅಲ್ಲದೆ ಈ ಸುಜ್ಞಾನ ವಿದ್ಯಾ ಸಂಸ್ಥೆ ಮುಂದೆ ರಾಜ್ಯದಲ್ಲೇ ಒಂದು ಮಾದರಿ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.






ಇದೇ ಸಂದರ್ಭ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆರ್ಥಿಕ ಬಹುಮಾನಗಳೊಂದಿಗೆ ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ರ‍್ಯಾಂಕ್ ವಿಜೇತರಿಗೆ ಐವತ್ತು ಸಾವಿರ ಮೌಲ್ಯದ ಚೆಕ್ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಹತ್ತು ಸಾವಿರ ಮೊತ್ತದ ಚೆಕ್ ನೀಡಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧವಾದಾಗ ಪೋಷಕರ ಗುರಿ ತಲುಪಲು ಸಾಧ್ಯವಾಗುತ್ತದೆ. ಅಂತಹಾ ಸೌಲಭ್ಯಗಳನ್ನು ಸುಜ್ಞಾನ ಎಜ್ಯುಕೇಶನಲ್ ಸಂಸ್ಥೆಯ ಮೂಲಕ ನೀಲಾಗುತ್ತಿದೆ ಎಂದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಶಿಕ್ಷಣ ಹೊಸ ಯುಗವನ್ನು ಸೃಷ್ಟಿಸಲು ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ಸಕ್ರಿಯವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಂದು ಧಾರ್ಮಿಕ ಹಬ್ಬಗಳನ್ನೂ ಸಂಸ್ಥೆಯಲ್ಲಿ ಆಚರಿಸುವ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಣೇತರ ಚಟುವಟಿಕೆಗಳಲ್ಲಿಯೂ ಸಿದ್ದಗೊಳಿಸುವಲ್ಲಿ ಯಶಸ್ಸು ಕಂಡಿದ್ದೇವೆ ಎಂದರು.

ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯೋಪಾದ್ಯಾಯ ಪ್ರದೀಪ್ ಕೆ ಅವರು ಶಾಲಾ ವಾರ್ಷಿಕ ವರದಿ ಮತ್ತು ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲ ರಂಜಿತ್ ಶೆಟ್ಟಿ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಅರುಣ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಹಾಗೂ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕಿ ಚರಿಷ್ಮಾ ಸ್ವಾಗತಿಸಿದರು. ಶಿಕ್ಷಕಿ ದೀಕ್ಷಾ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ವಿನಯಕುಮಾರ್ ಕೆ ನಿರೂಪಿಸಿದರು.