

ಡೈಲಿ ವಾರ್ತೆ:10/ಮಾ./2026


ಸಂಧಾನ ಸಭೆ ಯಶಸ್ವಿ: ಸರ್ಕಾರದ ಮಾತಿಗೆ ಒಪ್ಪಿದ ವೈದ್ಯಾಧಿಕಾರಿಗಳು, ನಾಳೆಯ ಮುಷ್ಕರ ರದ್ದು

ಬೆಂಗಳೂರು, ಮಾರ್ಚ್ 10: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಕರೆ ನೀಡಿದ್ದ ಮುಷ್ಕರವನ್ನು ಕೊನೆ ಕ್ಷಣದಲ್ಲಿ ಹಿಂಪಡೆಯಲಾಗಿದೆ. ಸರ್ಕಾರದೊಂದಿಗೆ ನಡೆದ ಸಂಧಾನ ಸಭೆ ಯಶಸ್ವಿಯಾದ ಹಿನ್ನೆಲೆ, ನಾಳೆ (ಮಾರ್ಚ್ 11) ಘೋಷಿಸಲಾಗಿದ್ದ ಮುಷ್ಕರವನ್ನು ಸಂಘ ವಾಪಸ್ ಪಡೆದಿದೆ.
ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಒಟ್ಟು 14 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ವೈದ್ಯಾಧಿಕಾರಿಗಳು ಓಪಿಡಿ ಸೇವೆಗಳನ್ನು ಬಂದ್ ಮಾಡುವ ಮೂಲಕ ಮುಷ್ಕರಕ್ಕೆ ಕರೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಸೇವೆಯಲ್ಲಿ ತುರ್ತು ಪರಿಸ್ಥಿತಿ ಉಂಟಾಗುವ ಸಾಧ್ಯತೆ ಎದುರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣವೇ ವೈದ್ಯಾಧಿಕಾರಿಗಳ ಸಂಘದೊಂದಿಗೆ ಸಂಧಾನ ಸಭೆ ನಡೆಸಿತು.
ಸಂಧಾನ ಸಭೆಯಲ್ಲಿ ಸಂಘವು ಮುಂದಿಟ್ಟಿದ್ದ 14 ಬೇಡಿಕೆಗಳ ಪೈಕಿ 13 ಬೇಡಿಕೆಗಳನ್ನು ಈಡೇರಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಜೊತೆಗೆ ಮುಂದಿನ ಮೂರು ತಿಂಗಳೊಳಗೆ ಈ ಬೇಡಿಕೆಗಳನ್ನು ಅನುಷ್ಠಾನಗೊಳಿಸುವುದಾಗಿ ಸರ್ಕಾರ ತಿಳಿಸಿದೆ. ಸರ್ಕಾರದ ಭರವಸೆಯನ್ನು ಅಂಗೀಕರಿಸಿದ ವೈದ್ಯಾಧಿಕಾರಿಗಳ ಸಂಘ ಮುಷ್ಕರವನ್ನು ಹಿಂಪಡೆಯಲು ತೀರ್ಮಾನಿಸಿದೆ. ಇದರಿಂದ ರಾಜ್ಯದ ರೋಗಿಗಳಿಗೆ ನಿರಾಳತೆ ದೊರೆತಂತಾಗಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ಸೂಚನೆ ಮೇರೆಗೆ ವೈದ್ಯಾಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
“ಸಿಎನ್‌ಆರ್ ಪ್ರಕ್ರಿಯೆ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೇವೆ. ಜೇಷ್ಠತಾ ಪಟ್ಟಿಯೂ ಸಿದ್ಧವಾಗಿದೆ. ಪಿಜಿ ಕೋರ್ಸ್‌ಗೆ ಅವಕಾಶ ನೀಡುವ ವಿಚಾರಕ್ಕೂ ಸಹ ಒಪ್ಪಿದ್ದೇವೆ. ಉಳಿದ ವಿಷಯಗಳ ಕುರಿತು ಸಹ ಚರ್ಚಿಸಿ ತೀರ್ಮಾನಕ್ಕೆ ಬರಲಾಗುತ್ತದೆ,” ಎಂದು ಹೇಳಿದರು.
ಇನ್ನೂ ಔಷಧಿ ಪೂರೈಕೆಯ ವಿಷಯದಲ್ಲಿಯೂ ಕ್ರಮ ಕೈಗೊಂಡಿರುವುದಾಗಿ ಸಚಿವರು ತಿಳಿಸಿದರು. “ಔಷಧಿಗಳ ಖರೀದಿಗೆ ಸರ್ಕಾರದಿಂದಲೇ ಹಣ ನೀಡಲಾಗಿದೆ. ಔಷಧಿಗಳು ಎಲ್ಲಿಂದ ಬರುತ್ತವೆ ಎಂಬುದಕ್ಕಿಂತ ಜನರಿಗೆ ಅವು ಸಮಯಕ್ಕೆ ಸಿಗುವುದು ಮುಖ್ಯ. ಈ ವಿಷಯದಲ್ಲೂ ವೈದ್ಯಾಧಿಕಾರಿಗಳ ಸಂಘ ಒಪ್ಪಿದೆ,” ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರ ಹಾಗೂ ವೈದ್ಯಾಧಿಕಾರಿಗಳ ಸಂಘದ ನಡುವೆ ನಡೆದ ಈ ಸಂಧಾನದಿಂದ ಘೋಷಿತ ಮುಷ್ಕರ ತಪ್ಪಿದಂತಾಗಿದ್ದು, ರಾಜ್ಯದ ಆರೋಗ್ಯ ಸೇವೆಯಲ್ಲಿ ಉಂಟಾಗಬಹುದಾಗಿದ್ದ ಅಸ್ತವ್ಯಸ್ತತೆ ತಾತ್ಕಾಲಿಕವಾಗಿ ತಪ್ಪಿದಂತಾಗಿದೆ.