ಡೈಲಿ ವಾರ್ತೆ : 10/ಮಾ./2026

ಕರ್ನಾಟಕ ರಕ್ಷಣಾ ವೇದಿಕೆ ಕುಂದಾಪುರ ತಾಲೂಕಿಗೆ ನೂತನ ಸಾರಥ್ಯ : ನೂತನ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪಡುಮುಂಡು ಆಯ್ಕೆ

ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆ ಕುಂದಾಪುರ ತಾಲೂಕಿನ ನೂತನ ಅಧ್ಯಕ್ಷರಾಗಿ ಸಂಘಟನಾ ಚತುರ ಕನ್ನಡದ ಕಟ್ಟಾಳು ಸಂತೋಷ್ ಶೆಟ್ಟಿ ಪಡುಮುಂಡು ಆಯ್ಕೆಯಾದರು.

ಕರವೇ ರಾಜ್ಯದ್ಯಕ್ಷರಾದ ಟಿ. ಎ ನಾರಾಯಣಗೌಡರ ಆದೇಶದಂತೆ ಉಡುಪಿ ಜಿಲ್ಲಾಧ್ಯಕ್ಷರಾದ ಅ.ರಾ ಪ್ರಭಾಕರ್ ಪೂಜಾರಿಯವರ ನೇತೃತ್ವದಲ್ಲಿ ಸಂತೋಷ್ ಶೆಟ್ಟಿ ಪಡುಮುಂಡು ಇವರನ್ನು ಕುಂದಾಪುರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಹೊಸದಾಗಿ ಆಯ್ಕೆಯಾಗಿರುವ ನೂತನ ಅಧ್ಯಕ್ಷರು ಕೇವಲ ಒಬ್ಬ ಪದಾಧಿಕಾರಿಯಾಗಿ ಮಾತ್ರವಲ್ಲದೆ, ಕನ್ನಡದ ಕಟ್ಟಾಳುವಾಗಿ, ಸಾಮಾನ್ಯ ಜನರ ಧ್ವನಿಯಾಗಿ ಹೊರಹೊಮ್ಮುವ ಭರವಸೆ ಮೂಡಿಸಿದ್ದಾರೆ.

​ನೂತನ ಸಾರಥಿಯ ಹೆಗಲ ಮೇಲೆ ಈಗ ದೊಡ್ಡ ಜವಾಬ್ದಾರಿಯಿದೆ. ಕರಾವಳಿ ಭಾಗದಲ್ಲಿ ಪರಭಾಷಿಕರ ಹಾವಳಿಯ ನಡುವೆ ನಮ್ಮತನವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಘಟನೆಯು ಕೆಲವು ಪ್ರಮುಖ ಗುರಿಗಳನ್ನು ಹಾಕಿಕೊಂಡಿದೆ.

​ಸ್ಥಳೀಯ ಯುವಶಕ್ತಿಯ ಸಂಘಟನೆ: ಯುವಜನತೆಯನ್ನು ಕನ್ನಡದ ಕೆಲಸಗಳಲ್ಲಿ ತೊಡಗಿಸುವ ಮೂಲಕ ಸಂಘಟನೆಯನ್ನು ಬೇರುಮಟ್ಟದಿಂದ ಬಲಪಡಿಸುವುದು.

​ಕನ್ನಡ ನಾಮಫಲಕಗಳ ಕಡ್ಡಾಯ: ತಾಲೂಕಿನಾದ್ಯಂತ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.

​ಕಾರ್ಮಿಕರ ಮತ್ತು ರೈತರ ಹಿತರಕ್ಷಣೆ: ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಕಾನೂನಾತ್ಮಕವಾಗಿ ಹಾಗೂ ಹೋರಾಟದ ಮೂಲಕ ನ್ಯಾಯ ಒದಗಿಸುವುದು.

​ಸಾಂಸ್ಕೃತಿಕ ಜಾಗೃತಿ: ಕುಂದಾಪುರದ ವಿಶಿಷ್ಟ ಭಾಷೆ ಮತ್ತು ಸಂಸ್ಕೃತಿಯನ್ನು ರಾಜ್ಯಾದ್ಯಂತ ಪಸರಿಸುವ ಕೆಲಸ ಮಾಡುವುದು.

​ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಅ.ರಾ. ಪ್ರಭಾಕರ್ ಪೂಜಾರಿ ಅವರು, “ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದು ಎಂದರೆ ಅದು ಕೇವಲ ಹಾರ-ತುರಾಯಿಗಳ ಸಂಭ್ರಮವಲ್ಲ. ಅದು ಸದಾ ಜಾಗೃತವಾಗಿರುವ, ನೂರಾರು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಹೋಗುವ ಕಠಿಣ ಹಾದಿ. ಸಂಘಟನೆಯ ಶಿಸ್ತು ಮತ್ತು ಧೈರ್ಯದ ಮೂಲಕ ಆಡಳಿತ ಯಂತ್ರವನ್ನು ಎಚ್ಚರಿಸುವ ಮತ್ತು ಶೋಷಿತರ ಪರ ನಿಲ್ಲುವ ಕೆಲಸ ಸದಾ ನಡೆಯಲಿ ಜೊತೆಗೆ ಹೋರಾಟಗಳು ನಿರಂತರವಾಗಿರಲಿ ಎಂದರು.

ಅಧಿಕಾರ ಎಂಬುದು ಸೇವೆಯ ಸುಗಮ ಹಾದಿಯಾಗಲಿ, ಹೋರಾಟ ಎಂಬುದು ಕನ್ನಡದ ಉಸಿರಾಗಲಿ. ನೂತನ ಅಧ್ಯಕ್ಷರ ಸಾರಥ್ಯದಲ್ಲಿ ಕುಂದಾಪುರ ಕರವೇ ಹೊಸ ಇತಿಹಾಸ ಬರೆಯಲಿ ಎಂಬುದು ಸರ್ವರ ಆಶಯ. ಈ ನೂತನ ಪಯಣವು ಯಶಸ್ವಿಯಾಗಲಿ, ಕುಂದಾಪುರದಲ್ಲಿ ಕನ್ನಡದ ಕಹಳೆ ಮೊಳಗಲಿ.