ಡೈಲಿ ವಾರ್ತೆ: 09/DEC/2025

ಶಾಲಾ ಬಸ್ ಚಾಲಕನ ನಿರ್ಲಕ್ಷ:
8 ವರ್ಷದ ಬಾಲಕಿ ಬಸ್ಸಿನಡಿಗೆ ಬಿದ್ದು ದುರಂತ ಸಾವು

ಬೀದರ್: ಶಾಲೆಯ ವಾಹನ ಹರಿದು ಎಂಟು ವರ್ಷದ ಬಾಲಕಿ ದುರಂತ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಜನವಾಡಾ ಗ್ರಾಮದ ಪೊಲೀಸ್‌ ಕ್ವಾಟರ್ಸ್‌ ಬಳಿ ನಡೆದಿದೆ.

ಗಡಿಕುಶನೂರು ಗ್ರಾಮದ ನಿವಾಸಿ, ಐದನೇ ಕ್ಲಾಸ್ ವಿದ್ಯಾರ್ಥಿನಿ ರುತ್ವ (8) ಸಾವನ್ನಪ್ಪಿದ ಬಾಲಕಿ.

ಬೀದರ್ ತಾಲೂಕಿನ ಜನಾವಾಡಾ ಗ್ರಾಮದ ಗುರುನಾನಕ್ ಶಾಲೆಯಲ್ಲಿ ಓದುತ್ತಿದ್ದು ಇಂದು ಮಧ್ಯಾಹ್ನ ಶಾಲೆಯಿಂದ ವಾಪಸ್ ಮನೆಗೆ ಬರುತ್ತಿದ್ದಾಗ ಬಸ್ಸಿನಡಿಗೆ ಬಿದ್ದು ಮೃತಪಟ್ಟಿದ್ದಾಳೆ.

ಎಂದಿನಂತೆ ಶಾಲೆಯಿಂದ ವಾಹನದಲ್ಲಿ ಮನೆವರೆಗೂ ಬಾಲಕಿಯನ್ನು ಡ್ರಾಪ್ ಮಾಡಿದ್ದರು. ಆದರೆ ಬಾಲಕಿ ಸ್ಕೂಲ್ ಬಸ್ ಇಳಿದು ಬಸ್ ಪಕ್ಕವೇ ನಿಂತಿದ್ದಳು. ಬಾಲಕಿ ಬಸ್ ಬಳಿಯಿರುವುದನ್ನ ಗಮನಿಸದೆ ಚಾಲಕ ಬಸ್ ಓಡಿಸಿದ್ದು ಆಕೆಯ ಮೇಲಿನಿಂದಲೇ ಹರಿದಿದೆ. ಬಸ್ಸಿನಡಿಗೆ ಬಿದ್ದ ಬಾಲಕಿ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮೃತಪಟ್ಟಿದ್ದಾಳೆ.

ದುರಂತ ಚಾಲಕನ ನಿರ್ಲಕ್ಷ್ಯದಿಂದ ಬಾಲಕಿ ಸಾವಿಗೀಡಾಗಿದ್ದಾಳೆ.
ಸಾವಿನ ಸುದ್ದಿ ತಿಳಿದ ತಕ್ಷಣ ಕುಟುಂಬಸ್ಥರು ಮತ್ತು ಸಂಬಂಧಿಕರು ಬೀದರ್‌ನ ಬ್ರಿಮ್ಸ್ ಆಸ್ಪತ್ರೆ ಆವರಣಕ್ಕೆ ದೌಡಾಯಿಸಿದ್ದು, ಪುಟ್ಟ ಮಗಳ ಸಾವಿನಿಂದ ತೀವ್ರ ದುಃಖತಪ್ತರಾಗಿ ಗೋಳಾಡಿದರು.

ನಿರ್ಲಕ್ಷ್ಯದಿಂದ ಅಮಾಯಕ ಮಗುವಿನ ಸಾವಿಗೆ ಕಾರಣನಾದ ಶಾಲಾ ವಾಹನ ಚಾಲಕನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ಜನವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನ ಚಾಲಕನ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲಾಗಿದೆ.