
ಡೈಲಿ ವಾರ್ತೆ: 11/DEC/2025
ಹೆಜಮಾಡಿ| ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ – ಮಹಿಳೆ ಮೃತ್ಯು, ಹಲವರಿಗೆ ಗಾಯ

ಉಡುಪಿ: ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರ್ಮಿಕರು ಮತ್ತು ಕಾಂಕ್ರೀಟ್ ಉಪಕರಣಗಳನ್ನು ಸಾಗಿಸುತ್ತಿದ್ದ ಟೆಂಪೋ ಟಯರ್ ಸ್ಫೋಟಗೊಂಡು ಪಲ್ಟಿಯಾಗಿ ಮಹಿಳಾ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.
ಮೃತರನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ
ಅಪಘಾತದಲ್ಲಿ ಸಾವಿತ್ರಮ್ಮ, ಮಹಾಂತೇಶ್ ಮತ್ತು ಇತರ ಐದು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೂಲ್ಕಿಯಿಂದ ಉಡುಪಿ ಕಡೆಗೆ ಸಾಗಿಸುತ್ತಿದ್ದ ಟೆಂಪೋದಲ್ಲಿ ಪುರುಷರು ಮತ್ತು ಮಹಿಳಾ ಕಾರ್ಮಿಕರು, ಕಾಂಕ್ರೀಟ್ ಮಿಶ್ರಣ ಯಂತ್ರ ಮತ್ತು ಇತರ ಸಾಮಗ್ರಿಗಳು ಇದ್ದವು. ವಾಹನವು ಅತಿ ವೇಗವಾಗಿ ಚಲಿಸುತ್ತಿದ್ದಾಗ, ಅದರ ಒಂದು ಟಯರ್ ಇದ್ದಕ್ಕಿದ್ದಂತೆ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಪಲ್ಟಿಯಾದ ಟೆಂಪೋ ಅಡಿಯಲ್ಲಿ ಹಲವಾರು ಕಾರ್ಮಿಕರು ಸಿಲುಕಿಕೊಂಡಿದ್ದರು, ಮತ್ತು ಸ್ಥಳೀಯರ ಸಹಾಯದಿಂದ ಹೊರತೆಗೆಯಲಾಯಿತು. ಓರ್ವ ಮಹಿಳೆ ಯಂತ್ರದ ಕೆಳಗೆ ಸಿಲುಕಿಕೊಂಡಿದ್ದರಿಂದ, ಸಾರ್ವಜನಿಕರು ಮತ್ತು ಟೋಲ್ ಸಿಬ್ಬಂದಿ ಆಕೆಯನ್ನು ಹೊರ ತೆಗೆಯಲು ತೀವ್ರ ಪ್ರಯತ್ನ ನಡೆಸಿದರು. ಬಳಿಕ ಹೆಜಮಾಡಿ ಟೋಲ್ ಆಂಬ್ಯುಲೆನ್ಸ್ ಮತ್ತು ಕ್ರೇನ್ ತಕ್ಷಣ ಬಂದು ಮಹಿಳೆಯನ್ನು ರಕ್ಷಿಸಲಾಯಿತು.
ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಟೋಲ್ ಆಂಬ್ಯುಲೆನ್ಸ್ ಮೂಲಕ ಮುಕ್ಕಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.