ಡೈಲಿ ವಾರ್ತೆ: 21/DEC/2025

ಭ್ರಷ್ಟಾಚಾರ ಆರೋಪ ಹೊತ್ತವರ ಪ್ರಾಯೋಜಕತ್ವದಲ್ಲಿ ತನಿಖೆಗೆ ಬಂದ ಲೋಕಾಯುಕ್ತದವರ ಮೋಜು ಮಸ್ತಿ!

ಸಾಲಿಗ್ರಾಮ: ಇಡೀ ಭಾರತದಲ್ಲೇ ಭ್ರಷ್ಟಾಚಾರ ನಿಗ್ರಹದಲ್ಲಿ ‘ಕರ್ನಾಟಕ ಲೋಕಾಯುಕ್ತ’ ಸಂಸ್ಥೆಗೆ ಅತ್ಯುನ್ನತ ಗೌರವ ಮತ್ತು ತನ್ನದೇ ಆದ ಖ್ಯಾತಿಯಿದೆ, ಆದರೆ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಾಲಿಗ್ರಾಮದ ಘನ ತ್ಯಾಜ್ಯ ಘಟಕ’ದ ನಿರ್ಮಾಣದ ಕುರಿತು ತನಿಖೆ ನಡೆಸಲು ಬಂದ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರನ್ನು ತಮ್ಮ ಮೋಜು ಮಸ್ತಿಯಿಂದ ದಂಗು ಬಡಿಸಿದ್ದಾರೆ. ಅದರಲ್ಲೂ ಆರೋಪ ಹೊತ್ತವರೇ ತನಿಖೆಗೆ ಬಂದ ಲೋಕಾ ಅಧಿಕಾರಿಗಳಿಗೆ ಸಂಭ್ರಮ ಏರ್ಪಡಿಸಿರುವುದು ಈ ಪವಿತ್ರ ಸಂಸ್ಥೆಯ ಹೆಸರಿಗೆ ಮಸಿ ಬಳಿಯುವಂತಿದೆ.

ಘನ ತ್ಯಾಜ್ಯ ನಿರ್ಮಾಣ ಘಟಕದಲ್ಲಿ ರಾಜಾರೋಷವಾಗಿ ನಡೆದಿರುವ ಗೋಲ್ ಮಾಲ್ ಬಹಳಷ್ಟು ಸುದ್ದಿಯಾಗಿ ಭ್ರಷ್ಟರಿಗೆ ಶಿಕ್ಷೆ ಯಾಗಲೇ ಬೇಕೆಂದು ಪಟ್ಟು ಹಿಡಿಯಲಾಗಿತ್ತು. ಹಲವು ಪ್ರತಿಭಟನೆಗಳ ಬಳಿಕ ತನಿಖೆ ಯನ್ನು ಲೋಕಾಯುಕ್ತ ವಹಿಸಿಕೊಂಡಾಗ ಸಾರ್ವಜನಿಕರು ಹರುಷ ಪಟ್ಟಿದ್ದರು ಇನ್ನೇನು ಆರೋಪಿಗಳ ಮುಖವಾಡ ಕಳಚಿ ಕಾನೂನಿನ ಉರುಳಿಗೆ ಬೀಳುತ್ತಾರೆ ಎಂದು ಸಂಭ್ರಮ ಮಿಸಿದ್ದರು. ಆದರೆ ಕಟ್ಟು ನಿಟ್ಟಿನ ತನಿಖೆ ನಡೆಸಬೇಕಾದ ಲೋಕಾ ಅಧಿಕಾರಿಗಳೇ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧಿಕಾರಿಗಳ ಪ್ರಾಯೋಜಕತ್ವದಲ್ಲಿ ‘ಸಾಸ್ತಾನ ಪ್ಯಾರಡೈಸ್’ ಮತ್ತು ‘ತವಾ ಪಂಜಾಬ್’ ಹೋಟೆಲ್‌ಗಳಲ್ಲಿ ಭರ್ಜರಿ ಭೋಜನ ಸವಿದಿದ್ದಾರೆ. ಅಷ್ಟೇ ಅಲ್ಲ, ಅವರದೇ ಖರ್ಚಿನಲ್ಲಿ ‘ಕಾಯಾ ಕಿಂಗ್ ಪಾಯಿಂಟ್’ನಲ್ಲಿ ನಲಿದಾಡಿದ್ದಾರೆ. ಅಷ್ಟಕ್ಕೇ ಸೀಮಿತವಾಗದೆ, ಉಡುಪಿ ಕೃಷ್ಣಮಠ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಾಲಯಗಳಿಗೂ ಆರೋಪಿಗಳ ಜೊತೆಯಲ್ಲಿ ಹೋಗಿ ನಿನ್ನ ಕೃಪೆ ಸದಾ ಇರಲೆಂದು ದರ್ಶನ ಪಡೆದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ದೂರುದಾರ ನಾಗರಾಜ್ ಗಾಣಿಗ ಆರೋಪಿಸಿದ್ದಾರೆ. ಅಲ್ಲದೆ 2ನೇ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಅಸಲಿಗೆ ಇದು ಭ್ರಷ್ಟಾಚಾರದ ತನಿಖೆಯೋ ಅಥವಾ ಲೋಕಾದವರಿಗೆ ಆರೋಪಿಗಳ ಪ್ರಾಯೋಜಿತ ಪಿಕ್ ನಿಕ್ ಕಮ್ ‘ಪುಣ್ಯಕ್ಷೇತ್ರ ದರ್ಶನ ಭಾಗ್ಯ’ವೋ? ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಪ್ರಶ್ನಿಸಿದ್ದಾರೆ. ಈ ರೀತಿಯಾಗಿ ತನಿಖಾಧಿಕಾರಿಗಳೇ ಆರೋಪಿಗಳಿಗೆ ಜಿ ಹುಜೂರ್ ಎಂದು ಅಡ್ಡ ಬಿದ್ದರೆ, ಸಾಲಿಗ್ರಾಮದ ಜನತೆ ನ್ಯಾಯಕ್ಕಾಗಿ ಇನ್ಯಾರಯಾರ ಕಾಲು ಹಿಡಿಯಬೇಕು?
ನ್ಯಾಯದ ಆಶಯಕ್ಕೆ ಕೊಡಲಿ ಏಟು ನೀಡುತ್ತಿರುವ ಇಂತಹ ಅಧಿಕಾರಿಗಳ ನಡೆ, ಭ್ರಷ್ಟಾಚಾರ ಮುಕ್ತ ಸಮಾಜದ ಕನಸಿಗೆ ತಣ್ಣೀರು ಎರಚಿದಂತಾಗಿದೆ. ಎಂದು ಕೋಟ ನಾಗೇಂದ್ರ ಪುತ್ರನ್ ಆಕ್ರೋಶ ಹತಾಶೆ ವ್ಯಕ್ತ ಪಡಿಸಿದ್ದಾರೆ.