ಡೈಲಿ ವಾರ್ತೆ: 23/DEC/2025

ನೇಮಕಾತಿಯಲ್ಲಿ ಕೊರಗರಿಗೆ ವಿಶೇಷ ಅವಕಾಶ ನೀಡೀ:
ಧರಣಿಗೆ ದ. ಸಂ.ಸ. ಅಂಬೇಡ್ಕರ್ ವಾದ ಬೆಂಬಲ – ಸುಂದರ ಮಾಸ್ತರ್

ಮಣಿಪಾಲ: ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗಾಗಿ ಆಗ್ರಹಿಸಿ ಈ ಸಮಾಜದ ಕಟ್ಟಕಡೆಯ ಅಸ್ಪೃಶ್ಯ ಬುಡಕಟ್ಟು ಸಮೂದಾಯವಾದ ಕೊರಗ ಸಮೂದಾಯದವರಿಗೆ ಸರಕಾರಿ ಉದ್ಯೋಗದಲ್ಲಿ ಆಗಿರುವ ಮತ್ತು ಈಗಲೂ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಮತ್ತು ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹಿಸಿ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಎದುರು ನಮ್ಮ ಕೊರಗ ಸಮೂದಾಯದವರು ಹಲವಾರು ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಬೆಂಬಲ ಸೂಚಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯು ಭೇಟಿಕೊಟ್ಟು ತಮ್ಮ ಬೆಂಬಲವನ್ನು ಘೋಷಿಸಿತು.

ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಮಾತನಾಡಿ ಈ ಸಮಾಜದಲ್ಲಿ ಕಟ್ಟಕಡೆಯ ಸಮೂದಾಯವಾದ ಕೊರಗ ಸಮೂದಾಯದವರು ಸರಕಾರ ಮತ್ತು ಸಂವಿಧಾನದತ್ತವಾದ ಎಲ್ಲಾ ಸವಲತ್ತುಗಳಿಂದ ವಂಚಿಸಲ್ಪಟ್ಟಿದ್ದಾರೆ. ಮೀಸಲಾತಿ ಎಂಬುದು ಕೊರಗರ ಪಾಲಿಗೆ ಗಗನ ಕುಸುಮವಾಗಿದೆ.
ಸರಕಾರಿ ಸವಲತ್ತು ಮತ್ತು ಮೀಸಲಾತಿ ಸೌಲಭ್ಯವನ್ನು ಅಸ್ಪೃಶ್ಯರಲ್ಲದ , ಸಮಾಜದಲ್ಲಿ ಮುಂದುವರಿದ ಜಾತಿಗಳು ಪರಿಶಿಷ್ಟ ಪಂಗಡದಲ್ಲಿ ಸೇರಿಕೊಂಡು ಎಲ್ಲಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ನಿಜವಾದ ಸಂವಿಧಾನದ ಆಶಯವಾದ ಅಸ್ಪೃಶ್ಯತೆ ಆಧಾರದ ಮೀಸಲಾತಿಯಿಂದ ಕೊರಗರು ವಂಚಿಸಲ್ಪಟ್ಟಿದ್ದಾರೆ.
ಎಷ್ಟೇ ಶಿಕ್ಷಣ ಪಡೆದರೂ ಅಸ್ಪೃಶ್ಯರಲ್ಲದ , ಬಲಾಡ್ಯ ಸ್ಪರ್ಶ್ಯ ಜಾತಿಗಳು ಪರಿಶಿಷ್ಟ ಪಂಗಡದ ಸಂಪೂರ್ಣ ಮೀಸಲಾತಿಯನ್ನು ಕಬಳಿಸುತ್ತಿದ್ದಾರೆ. ಶತಶತಮಾನಗಳಿಂದ ಶಿಕ್ಷಣ, ಸಮಾಜ , ಊರಿನಿಂದ ದೂರವೇ ತಳ್ಳಲ್ಪಟ್ಟ ಅತೀ ಹಿಂದುಳಿದ ಕೊರಗ ಸಮೂದಾಯದವರಿಗೆ ಅತೀ ಅಗತ್ಯವಾಗಿ ಪರಿಶಿಷ್ಟ ಪಂಗಡದ ಮೀಸಲಾತಿಯ ಹುಧ್ಧೆಗಳಿಗೆ ನೇರ ನೇಮಕಾತಿಯನ್ನು ಕೖಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಈ ಮೂಲಕ ಸರಕಾರವನ್ನು ಆಗ್ರಹಿಸುತ್ತದೆ. ಆದಷ್ಟು ಬೇಗ ಜಿಲ್ಲಾಡಳಿತ ಈ ಬಗ್ಗೆ ಒಂದು ಮಾತುಕತೆ ನಡೆಸಿ ಕೊರಗರಿಗೆ ಸರಿಯಾದ ನ್ಯಾಯ ಒದಗಿಸುವ ಕಾರ್ಯ ಮಾಡದೇ ಹೋದರೆ ದ. ಸಂ. ಸ. ತನ್ನ ಮುಂದಿನ ಹೋರಾಟ ಬಗ್ಗೆ ಯೋಚಿಸಬೇಕಾಗಬಹುದು ಈ ಮೂಲಕ ಎಚ್ಚರಿಸುತ್ತಿದೇವೆ ಎಂದರು.

ದ. ಸಂ. ಸ. ಪದಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿಕೊಟ್ಟು ಡೋಲು ಹೊಡೆದು ಹೋರಾಟದ ಗೀತೆಗಳನ್ನು ಹಾಡಿ ಕೊರಗರ ಅಹೋರಾತ್ರಿ ಧರಣಿಯೊಂದಿಗೆ ಕೖಜೋಡಿಸಿದರು.
ದ. ಸಂ. ಸ. ಮೖಸೂರು ವಿಭಾಗೀಯ ಸಂಘಟನಾ ಸಂಚಾಲಕರರಾದ ಶ್ಯಾಮರಾಜ್ ಬಿರ್ತಿ , ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು. ಜಿಲ್ಲಾ ಸಂಘಟನಾ ಸಂಚಾಲಕರಾದ ಸುರೇಶ ಹಕ್ಲಾಡಿ, ಬ್ರಹ್ಮಾವರ ತಾಲೂಕು ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ , ಸಂಘಟನಾ ಸಂಚಾಲಕರಾದ ವಿಜಯ ಗಿಳಿಯಾರು, ವಿಠಲ ತೊಟ್ಟಂ ಉಪಸ್ಥಿತರಿದ್ದರು.