ಡೈಲಿ ವಾರ್ತೆ: 25/DEC/2025

ಚಿತ್ರದುರ್ಗದಲ್ಲಿ ಭೀಕರ ಅಪಘಾತ| ಹೆದ್ದಾರಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್​​​​, 17ಕ್ಕೂ ಹೆಚ್ಚು ಜನ ಸಜೀವ ದಹನ

ಚಿತ್ರದುರ್ಗ: ಆಂಧ್ರ ಪ್ರದೇಶದ ಕರ್ನೂಲ್ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಕ್ರಿಸ್​​​ಮಸ್​​ ಸಂಭ್ರಮ ಹಾಗೂ ಹೊಸ ವರ್ಷಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದ ವೇಳೆ ಒಂದು ಅಘಾತಕಾರಿ ಘಟನೆಯೊಂದು ನಿನ್ನೆ ರಾತ್ರಿ ಚಿತ್ರದುರ್ಗದ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ 17ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ಸೊಂದು ಹೊತ್ತಿಉರಿದಿದೆ. ಖಾಸಗಿ ಸ್ಲೀಪರ್ ಕೋಚ್​​ ಬಸ್​ನಲ್ಲಿದ್ದ 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಈ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಒಂದು ಕಡೆಯಿಂದ ಬರುತ್ತಿದ್ದ ಲಾರಿಯೊಂದು ಡಿವೈಡರ್​ ಹಾರಿ ಮತ್ತೊಂದು ಕಡೆಯಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಲೀಪರ್​ ಕೋಚ್​​ ಬಸ್​​​ ರಸ್ತೆ ಮಧ್ಯೆ ಹೊತ್ತಿ ಉರಿದಿದೆ. ಈ ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ. ಇನ್ನು ಈ ಲಾರಿ ಹಿರಿಯೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು ಬಸ್​​​ ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗುತ್ತಿತ್ತು. ಇದೀಗ ಘಟನಾ ಸ್ಥಳಕ್ಕೆ ಎಸ್​ಪಿ ರಂಜಿತ್​​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಿರಿಯೂರು ಗ್ರಾಮಾಂತರ ಠಾಣಾಯಲ್ಲಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

ಇನ್ನು ಈ ಬಸ್ಸಿನಲ್ಲಿ 15 ಮಹಿಳೆಯರು, 14 ಪುರುಷರು ಪ್ರಯಾಣಿಸುತ್ತಿದ್ದರು. ಒಟ್ಟು 32 ಸೀಟ್​ಗಳ ಬಸ್​​ನಲ್ಲಿ 29 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
ಬಸ್​​ನಲ್ಲಿ ಗೋಕರ್ಣದ 25 ಜನ, ಕುಮಟಾದ ಇಬ್ಬರು ಹಾಗೂ ಶಿವಮೊಗ್ಗದ ಇಬ್ಬರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇನ್ನು ಬಸ್ ಚಾಲಕ, ನಿರ್ವಾಹಕ ಮತ್ತು ಕೆಲವರು ಬಸ್ ನಿಂದ ಹೊರ ಜಿಗಿದು ಬಚಾವ್​​ ಆಗಿದ್ದಾರೆ. ಅಪಘಾತದಲ್ಲಿ ಕಂಟೇನರ್ ಲಾರಿ ಚಾಲಕ ಕುಲದೀಪ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.