ಡೈಲಿ ವಾರ್ತೆ: 25/DEC/2025

ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಟ್ರಕ್‌ ಗುದ್ದಿದ್ದರಿಂದ ದುರಂತ – ಸೀಬರ್ಡ್‌ ಮಾಲೀಕಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಟ್ರಕ್‌ ಗುದ್ದಿದ್ದರಿಂದ ದುರಂತ – ಸೀಬರ್ಡ್‌ ಮಾಲೀಕ

ಬೆಂಗಳೂರು: ವಿರುದ್ಧ ದಿಕ್ಕಿನಲ್ಲಿ ಬಂದ ಟ್ರಕ್‌ ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಗುದ್ದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಸೀಬರ್ಡ್‌ ಬಸ್‌ ಮಾಲೀಕ ನಾಗರಾಜು ತಿಳಿಸಿದ್ದಾರೆ.

ಗೊರ್ಲತ್ತು ಗ್ರಾಮದ ಬಳಿ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದೊಂದಿಗೆ ಮಾಹಿತಿ ನೀಡಿದ ಅವರು, ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸ್ಲೀಪರ್‌ ಬಸ್ಸಿನಲ್ಲಿ 29 ಜನ ಪ್ರಯಾಣಿಸುತ್ತಿದ್ದರು. ಟ್ರಕ್‌ ವಿರುದ್ಧ ದಿಕ್ಕಿನಿಂದ ಬಂದು ಡೀಸೆಲ್‌ ಟ್ಯಾಂಕ್‌ ಬಳಿ ಗುದ್ದಿದೆ. ಗುದ್ದಿದ ರಭಸಕ್ಕೆ ಮೊದಲು ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿತು. ನಂತರ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಿವರಿಸಿದರು.

ಪ್ರಯಾಣಿಕರ ಸುರಕ್ಷೆಗೆ ಸಂಬಂಧಿಸಿದ ಎಲ್ಲಾ ಮಾನದಂಡಗಳನ್ನು ಬಸ್ಸು ಹೊಂದಿತ್ತು. ಎರಡೂ ತುರ್ತು ನಿರ್ಗಮನ ದ್ವಾರವೂ ಇತ್ತು ಎಂದು ಹೇಳಿದರು.

29 ಪ್ರಯಾಣಿಕರ ಪೈಕಿ 25 ಮಂದಿ ಗೋಕರ್ಣಕ್ಕೆ ಬುಕ್‌ ಮಾಡಿದರೆ 2 ಮಂದಿ ಶಿವಮೊಗ್ಗ, 2 ಮಂದಿ ಕುಮಟಾಕ್ಕೆ ಸೀಟ್‌ ಬುಕ್‌ ಮಾಡಿದ್ದರು ಎಂದು ಮಾಹಿತಿ ನೀಡಿದರು.
ಬಸ್ಸಿನ ಕ್ಲೀನರ್‌ ಸಾಧಿಕ್‌ ಪ್ರತಿಕ್ರಿಯಿಸಿ, ರಾತ್ರಿ 1:30 ರಿಂದ 2 ಗಂಟೆಯ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಲಗಿದ್ದ ಬಸ್ಸಿನಿಂದ ನಾನು ಹೊರ ಬಿದ್ದಿದ್ದೆ. ನೋಡ ನೋಡುತ್ತಿದ್ದಂತೆ ಧಗಧಗನೆ ಬಸ್ ಹೊತ್ತಿ ಉರಿಯತೊಡಗಿತು. ಡ್ರೈವರ್ ಹೊರ ಬಿದ್ದಿದ್ದು ಅವರ ಕಾಲು ಕೈಗಳಿಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ನಮ್ಮ ಸಹಾಯಕ್ಕೆ ಬಂದರು. ಅಪಘಾತವಾಗುತ್ತಿದ್ದಂತೆ ಏನು ಆಗಿದೆ ಎನ್ನುವುದು ಗೊತ್ತಾಗದೆ ಶಾಕ್‌ನಲ್ಲಿ ಇದ್ದೆವು ಎಂದು ತಿಳಿಸಿದರು.