ಪುಣೆ ಬಾಂಬ್ ಸ್ಫೋಟದ ಆರೋಪಿಗೆ ಗುಂಡೇಟು – ನಡುರಸ್ತೆಯಲ್ಲಿ ಅನಾಮಿಕರಿಂದ ಹತ್ಯೆ

ಮುಂಬೈ: ಪುಣೆ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಅಸ್ಲಾಂ ಶಬ್ಬೀರ್ ಶೇಖ್ ಅಲಿಯಾಸ್ ಬಂಟಿ ಜಹಗೀರ್ದಾರ್‌ನನ್ನು (52) ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಶ್ರೀರಾಮಪುರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಶ್ರೀರಾಮಪುರದ ನಿವಾಸಿ ಜಹಗೀರ್ದಾರ್ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೊರಾವಕೆ ಕಾಲೇಜು ರಸ್ತೆಯಲ್ಲಿರುವ ಸ್ಮಶಾನದಿಂದ ಮರಳುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಜಹಗೀರ್ದಾರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಅಹಲ್ಯಾನಗರದ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ಪ್ರತಿಕ್ರಿಯಿಸಿ, ದಾಳಿಕೋರರ ಗುರುತು ಪತ್ತೆಯಾಗಿಲ್ಲ. ಪ್ರಾಥಮಿಕವಾಗಿ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದಾರೆಂದು ಶಂಕಿಸಲಾಗಿದೆ. ಕೊಲೆಯ ಹಿಂದಿನ ಉದ್ದೇಶವನ್ನು ದೃಢಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಅಪರಾಧದಲ್ಲಿ ಹೆಚ್ಚಿನ ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪೊಲೀಸರ ಪ್ರಕಾರ ಜಹಗೀರ್ದಾರ್ ಕುಖ್ಯಾತ ಅಪರಾಧಿಯಾಗಿದ್ದು ಅಕ್ರಮ ಮರಳು ವ್ಯವಹಾರ, ಸುಲಿಗೆ, ಕೊಲೆ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದಂತೆ 18 ಕೇಸ್‌ಗಳು ದಾಖಲಾಗಿವೆ. ಆತನನ್ನು ಪೊಲೀಸರು ಜಿಲ್ಲೆಯಿಂದಲೇ ಗಡಿಪಾರು ಮಾಡಿದ್ದರು. ಪುಣೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಹೊರತಾಗಿಯೂ ಸೇನಾ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಅಡಿ 2006 ರಲ್ಲಿ ನಾಸಿಕ್‌ನಲ್ಲಿ ಜಹಗೀರ್ದಾರ್‌ನನ್ನು ರಹಸ್ಯ ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು.

ಆಗಸ್ಟ್ 1, 2012 ರಂದು ಪುಣೆಯ ಜೆಎಂ ರಸ್ತೆಯಲ್ಲಿ ನಡೆದ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪದ ಅಡಿ ಜಹಗೀರ್ದಾರ್‌ನನ್ನು ಜನವರಿ 2013 ರಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ATS) ಬಂಧಿಸಿತ್ತು. ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ರಿಯಾಜ್ ಭಟ್ಕಳ್ ಸೂಚನೆಯ ಮೇರೆಗೆ ಬಾಂಬ್ ಸ್ಫೋಟಗಳನ್ನು ನಡೆಸಲಾಗಿದೆ ಎಂದು ಎಟಿಎಸ್ ತನಿಖೆಯಿಂದ ತಿಳಿದುಬಂದಿತ್ತು. ಜೆ.ಎಂ. ರಸ್ತೆ ಸರಣಿ ಬಾಂಬ್ ಸ್ಫೋಟ ಪ್ರಕರಣದ ಇತರ ಆರೋಪಿಗಳು ಜಹಗೀರ್ದಾರ್‌ನಿಂದ ಮೂರು ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಖರೀದಿಸಿದ್ದಾರೆ ಎಂದು ಎಟಿಎಸ್ ಆರೋಪಿಸಿತ್ತು.

ಅಕ್ಟೋಬರ್ 1, 2015 ರಂದು ಬಾಂಬೆ ಹೈಕೋರ್ಟ್ ಈತನಿಗೆ ಜಾಮೀನು ನೀಡಿತ್ತು. ತಿಂಗಳಿಗೊಮ್ಮೆ ಎಟಿಎಸ್ ಕಚೇರಿಗೆ ಹಾಜರಾಗುವಂತೆ ಕೋರ್ಟ್‌ ವಿಧಿಸಿದ್ದ ಷರತ್ತನ್ನು ಉಲ್ಲಂಘಿಸಿದ್ದಕ್ಕೆ ಮೇ 1, 2019 ರಲ್ಲಿ ಜಾಮೀನು ರದ್ದಾಗಿತ್ತು. ಜನವರಿ 2023 ರಲ್ಲಿ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ ನಂತರ ಮತ್ತೆ ಜೈಲಿನಿಂದ ಬಿಡುಗಡೆಯಾಗಿದ್ದ. ಸುಮಾರು ಆರು ವರ್ಷಗಳ ಕಾಲ ವಿಚಾರಣಾಧೀನ ಕೈದಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದರಿಂದ ಮತ್ತೆ ಸೆರೆವಾಸ ಅಗತ್ಯವಿಲ್ಲ ಎಂದು ಹೇಳಿ ಕೋರ್ಟ್‌ ಜಹಗೀರ್ದಾರ್‌ಗೆ ಜಾಮೀನು ಮಂಜೂರು ಮಾಡಿತ್ತು.