ಡೈಲಿ ವಾರ್ತೆ:JAN/01/2026

ಬೊಲೆರೋ ಪಿಕಪ್ ಟೈರ್ ಸಿಡಿದು ಪಲ್ಟಿ – ಮೂವರು ಸ್ಥಳದಲ್ಲೇ ಸಾವು

ಹಾಸನ, ಜ. 01: ಹೊಸ ವರ್ಷದ ಮೊದಲ‌ ದಿನವೇ ಅರಸೀಕೆರೆಯ ಚಿಕ್ಕಾರಹಳ್ಳಿ ಗೋಶಾಲೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಡಿಕೆ ಸಾಗಿಸುತ್ತಿದ್ದ ಬೊಲೆರೋ ಪಿಕಪ್ ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ.

ಮೃತರನ್ನು ಕಡೂರು ತಾಲೂಕಿನ ತಂಗ್ಲಿ ಗ್ರಾಮದ ಶಬ್ಬೀರ್ (55), ತಿಮ್ಮಣ್ಣ (53), ಸಂಜಯ್ (45) ಎಂದು ಗುರುತಿಸಲಾಗಿದೆ.

ಹಸಿ ಅಡಿಕೆ ಸಾಗಿಸುತ್ತಿದ್ದ ಪಿಕಪ್ ವಾಹನದ ಟೈರ್ ಬ್ಲಾಸ್ಟ್ ಆಗಿ, ರಸ್ತೆಗೆ ವಾಹನ ಪಲ್ಟಿಯಾಗಿದೆ. ‌ಪರಿಣಾಮ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಹಾಸನ ಮೂಲದ ನೌಶದ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಕಡೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅರಸೀಕೆರೆಯಿಂದ ಕಡೂರು ಕಡೆಗೆ ಹಸಿ ಅಡಿಕೆ ಸಾಗಿಸುವಾಗ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಪಿಕಪ್‌ನ ಟೈರ್‌ ಸ್ಫೋಟಗೊಂಡಿದೆ.‌ ವಾಹನದಲ್ಲಿದ್ದ ಅಡಿಕೆ ಮೂಟೆಗಳು ರಸ್ತೆಗೆ ಬಿದ್ದಿದ್ದು, ಅಡಿಕೆಗಳು ರಸ್ತೆ ತುಂಬಾ ಚೆಲ್ಲಾಡಿವೆ. ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.