
ಡೈಲಿ ವಾರ್ತೆ:JAN/03/2026
ಸಾಲಿಗ್ರಾಮದ ಚಿತ್ರಪಾಡಿಯ ಪಿ.ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಶತಮಾನೋತ್ಸವ ಸಂಭ್ರಮ: ನಮ್ಮ ಯಶಸ್ಸಿಗೆ ಶಿಕ್ಷಕರ ಪಾತ್ರ ಗಣನೀಯವಾದದ್ದು- ರವೀಂದ್ರ ನಾಯಕ್

ಕೋಟ, ಜ. 03: ಸಾಲಿಗ್ರಾಮದ ಚಿತ್ರಪಾಡಿಯ ಪಿ.ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಎರಡು ದಿನಗಳ ಕಾಲ ನಡೆಯುವ ಶತಮಾನೋತ್ಸವ ಸಂಭ್ರಮದ ಕಾರ್ಯಕ್ರಮ ಶನಿವಾರ ಶಾಲಾ ವಠಾರದಲ್ಲಿ ಪ್ರಾರಂಭಗೊಂಡಿತು.
ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ
ಶತಮಾನೋತ್ಸವ ಸಭಾ ಕಾರ್ಯಕ್ರಮವನ್ನು ಬೆಂಗಳೂರಿನ ಉದ್ಯಮಿ ರವೀಂದ್ರ ನಾಯಕ್ ಸಾಲಿಗ್ರಾಮ ಉದ್ಘಾಟಿಸಿ ಮಾತನಾಡಿ ನಾವು ಉದ್ಯಮರಂಗದಲ್ಲಿ ಗುರುತಿಸಿಕೊಳ್ಳಲು ಅಥವಾ ಈ ಹಂತದಲ್ಲಿ ಬೆಳೆಯಲು ಶಿಕ್ಷಕರ ಪಾತ್ರ ಗಣನೀಯವಾದದ್ದು, ಆದರೆ ಪ್ರಸ್ತುತ ವಿದ್ಯಾಮಾನದಲ್ಲಿ ಮಕ್ಕಳು ಆಧುನಿಕತೆಯಲ್ಲೆ ಮುಳುಗಿ ಅವರ ಸ್ಥಿತಿಗತಿ ಶೋಚನೀಯವಾಗಿದೆ ಇದಕ್ಕೆ ಪೋಷಕರ ಹೊಣೆಗಾರಿ ಬಹುಪಾಲಾಗಿದೆ ಈ ನಿಟ್ಟಿನಲ್ಲಿ ಮಕ್ಕಳ ಭವಿಷ್ಯವನ್ನು ಪೋಷಕರೇ ಜಾಗೃತರಾಗಿ ಕ್ರಮಿಸುವಾಗೆ ನೋಡಿಕೊಳ್ಳಿ ಎಂದು ಕರೆಕೊಟ್ಟರು.
ಸಭೆಯ ಅಧ್ಯಕ್ಷತೆಯನ್ನು ಕೋಟ ಸಹಕಾರಿ ಸಂಘದ ಅಧ್ಯಕ್ಷ ಡಾ.ಕೃಷ್ಣಕಾಂಚನ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಉಡುಪಿ ಇಂಡಸ್ಟ್ರಿಯಲ್ ಕೋ.ಅಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಹೆಗ್ಡೆ, ಬ್ರಹ್ಮಾವರ ಪತ್ರಕರ್ತಸಂಘದ ಅಧ್ಯಕ್ಷ ರಾಜೇಶ್ ಗಾಣಿಗ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ, ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್, ನಿವೃತ್ತ ಬ್ಯಾಂಕ್ ಉದ್ಯೋಗಿ ಮಾಧವ ಪೈ, ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಉಪಾಧ್ಯಾ, ಉದ್ಯಮಿ ಕೊಗ್ಗ ಶ್ಯಾನುಭಾಗ್, ಪೂರ್ಣಪ್ರಜ್ಞಾ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರ್ ದೇವಾಡಿಗ, ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖಾಧಿಕಾರಿ ಭಾಗೀರಥಿ ಆಚಾರ್, ಶಾಲಾ ಎಸ್ ಡಿ ಎಂಸಿ ಮಾಜಿ ಅಧ್ಯಕ್ಷ ರಾಘವೇಂದ್ರ ಆಚಾರ್, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಯೊಗೀಶ್ ಕುಮಾರ್, ಅಕ್ಷರರಥ ಸಮಿತಿ ಅಧ್ಯಕ್ಷ ನಾಗರಾಜ್ ಗಾಣಿಗ ಉಪಸ್ಥಿತರಿದ್ದರು.
ಗಣ್ಯರ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಪಲ್ಲವಿ,ಗಾಯಿತ್ರಿ ನಿರೂಪಿಸಿದರು. ಶಿಕ್ಷಕಿ ವಿಜಯ ವಂದಿಸಿದರು.
ಶಾಲಾ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.
ಶಾಲಾ ಶಿಕ್ಷಕರಿಯರಾದ ಸವಿತಾ, ಪಲ್ಲವಿ, ಕುಸುಮಾ ಬಹುಮಾನ ಪತ್ರವಾಚಿಸಿದರು.
ವೈಭವದ ಮೆರವಣ ಗೆ ಚಾಲನೆ
ವಿಶೇಷವಾಗಿ ಶಾಲೆಯ ಸಮೀಪದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ದೇಗುಲದ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಯಕ್ಷಗಾನ ದೇವಿ ಮಹಾತ್ಮೆ ವೇಷ ,ಭಜನಾ ತಂಡಗಳಿಂದ ಕುಣಿತ ಭಜನೆ, ಚಂಡೆ ಬಳಗ, ವಾದ್ಯಘೋಷ,ಮಕ್ಕಳು ಪೋಷಕರು, ಗ್ರಾಮದ ನಾಗರಿಕರು ಮೆರವಣಿಗೆಯಲ್ಲಿ ಭಾಗಿಯಾದರು.

ಪೂರ್ವಾಹ್ನ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಭಟ್ ನೆರವೆರಿಸಿದರು.
ಮುಖ್ಯ ಅಭ್ಯಾಗತರಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀಕಂಠ ಉಪಾಧ್ಯಾ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್ ಹಂದೆ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ತುಂಗ, ಎಳೆ ಮಹಾಲಿಂಗೇಶ್ವರ ದೇವಸ್ಥಾನ ಚಿತ್ರಪಾಡಿ ಇದರ ಅಧ್ಯಕ್ಷ ಜಗದೀಶ್ ತುಂಗ , ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ , ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.