
ಡೈಲಿ ವಾರ್ತೆ:JAN/14/2026
ಕನ್ನಡದ ಅಯ್ಯಪ್ಪ ಭಕ್ತರ ಮೇಲೆ ತಮಿಳುನಾಡಿನಲ್ಲಿ ದೌರ್ಜನ್ಯ

ಚಾಮರಾಜನಗರ, ಜ.14: ಕರ್ನಾಟಕದ ಶಬರಿಮಲೆ ಯಾತ್ರಿಗಳಿಗೆ ಕೇರಳದ ಚೆಕ್‌ಪೋಸ್ಟ್‌ಗಳಲ್ಲಿ ನಿರ್ಬಂಧ ಹೇರಿದ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ತಮಿಳುನಾಡಿನಲ್ಲಿ ಕನ್ನಡದ ಅಯ್ಯಪ್ಪ ಭಕ್ತರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ.
ತಮಿಳುನಾಡಿನ ಮಧುರೈ ಬಳಿ ಶಬರಿಮಲೆಗೆ ಹೋಗಿ ಬರುತ್ತಿದ್ದ ಭಕ್ತರನ್ನು ತಡೆದ ಕಿಡಿಗೇಡಿಗಳು ಕೆಟ್ಟ ಪದಗಳಲ್ಲಿ ನಿಂದಿಸಿದ್ದಾರೆ. ವಾಹನದ ಮೇಲಿದ್ದ ಕನ್ನಡ ಬಾವುಟವನ್ನು ಕಿತ್ತು ಹಾಕಿ ದೌರ್ಜನ್ಯವೆಸಗಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ.
ಕರ್ನಾಟಕದಿಂದ ಮಾಲೆ ಧರಿಸಿ ಶಬರಿಮಲೆಗೆ ತೆರಳಿದ್ದ ಕನ್ನಡಿಗರು ವಾಪಸ್ ಬರುವ ವೇಳೆ ತಮಿಳುನಾಡಿನಲ್ಲಿ ಕೆಲವರು ನಮ್ಮ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿಯಿಂದ ಶಬರಿಮಲೆಗೆ ಹೋಗಿದ್ದ ಭಕ್ತರ ಜೊತೆ ತಮಿಳಿಗರು ಬಾವುಟ ತೆಗೆಯುವಂತೆ ಕಿರಿಕ್ ತೆಗೆದಿದ್ದಾರೆ ಎನ್ನಲಾಗುತ್ತಿದೆ.
ನಮ್ಮ ಪಾಡಿಗೆ ನಾವು ವಾಪಾಸಾಗುತ್ತಿದ್ದೆವು. ಈ ವೇಳೆ ತಮಿಳಿಗರು ಬಾವುಟದ ವಿಚಾರಕ್ಕೆ ಜಗಳ ತೆಗೆದಿದ್ದಾರೆ. ನಮ್ಮನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕನ್ನಡಿಗರು ಆರೋಪ ಮಾಡಿದ್ದಾರೆ. ತಮಿಳಿಗರ ದೌರ್ಜನ್ಯದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ನೆಟ್ಟಿಗರು ಭಾರೀ ಅಸಮಾಧಾನ ಹೊರಹಾಕಿದ್ದಾರೆ.
ಎರುಮಲೈನಲ್ಲಿ ಕನ್ನಡಿಗರ ವಾಹನಗಳಿಗೆ ನಿರ್ಬಂಧ:
ಮಂಗಳವಾರ ಬೆಳಗ್ಗೆ ಕೇರಳದ ಎರುಮಲೈನಲ್ಲಿ ಕೇರಳ ರಾಜ್ಯ ಪೊಲೀಸರು ಕರ್ನಾಟಕ ನೋಂದಣಿ ಇರುವ ವಾಹನಗಳಿಗೆ ನಿರ್ಬಂಧ ಹೇರಿದ್ದ ಆರೋಪ ಕೇಳಿಬಂದಿತ್ತು. ಕೇರಳ ರಾಜ್ಯ ಹಾಗೂ ಇತರೆ ವಾಹನಗಳಿಗೆ ಮಾತ್ರ ಪ್ರವೇಶ ನೀಡುತ್ತಿದ್ದರು. ಶಬರಿಮಲೆಗೂ ಮುನ್ನ ಎರುಮಲೈನಲ್ಲಿ ಕೇರಳ ಪೊಲೀಸರು ನೀವು 60 ಕಿಲೋ ಮೀಟರ್ ದೂರ ಖಾಸಗಿ ವಾಹನ ಬಳಸುವಂತಿಲ್ಲ. ಖಾಸಗಿ ವಾಹನದ ಬದಲು ಕೇರಳದ ಬಸ್ ವ್ಯವಸ್ಥೆ ಮಾಡಿದ್ದೇವೆ. ಅದರಲ್ಲಿ ನೀವು ತೆರಳಬೇಕು ಎಂದು ನಿರ್ಬಂಧ ವಿಧಿಸಿದ್ದರು. ಕರ್ನಾಟಕ ನೋಂದಣಿ ಇರುವ ವಾಹನಗಳಿಗೆ ಮಾತ್ರ ನಿರ್ಬಂಧದ ಹಿನ್ನೆಲೆಯಲ್ಲಿ ಕೇರಳ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಶಬರಿಮಲೆ ಯಾತ್ರಾರ್ಥಿಗಳು ರಸ್ತೆಯಲ್ಲೇ ಕುಳಿತು ಭಜನೆ ಮಾಡಿ, ಪ್ರತಿಭಟನೆ ನಡೆಸಿದ್ದರು.