ಡೈಲಿ ವಾರ್ತೆ: ಮಾ./05/2026

ಕಾಮಣ್ಣನ ಉತ್ಸವ ಮುಗಿಸಿ ಮರಳುವಾಗ ಭೀಕರ ಅಪಘಾತ; ಇಬ್ಬರ ದುರ್ಮರಣ, ಎಂಟು ಮಂದಿಗೆ ಗಾಯ

​ಗದಗ: ಜಿಲ್ಲೆಯ ತಾಲೂಕಿನ ಹರ್ತಿ ಗ್ರಾಮದ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ಸುಮಾರು 10 ಜನರು ಗೋಜನೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಮಣ್ಣನ ಉತ್ಸವ ಹಾಗೂ ಡಿಜೆ ಮೆರವಣಿಗೆ ನೋಡಲು ತೆರಳಿದ್ದರು. ಸಂಭ್ರಮ ಮುಗಿಸಿ ಬೆಳಗಿನ ಜಾವ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಮರಳಿ ಹಿರೇಕೊಪ್ಪಕ್ಕೆ ಬರುತ್ತಿದ್ದಾಗ, ಹರ್ತಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯ ಮರಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಹಿರೇಕೊಪ್ಪ ಗ್ರಾಮದ ಮುತ್ತಪ್ಪ ಸುಟಗೇರಿ (35) ಹಾಗೂ ನಿಂಗಪ್ಪ ಯಳವತ್ತಿ (36) ಎಂಬುವವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ವಾಹನದಲ್ಲಿದ್ದ ಉಳಿದ ಎಂಟು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಬೆಳಗಿನ ಜಾವ ಚಾಲಕನಿಗೆ ಆವರಿಸಿದ ನಿದ್ರೆ ಮಂಪರು ಹಾಗೂ ಅಜಾಗರೂಕತೆಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಏಸ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
​ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.