

ಡೈಲಿ ವಾರ್ತೆ: ಮಾ./04/2026

ಫರಂಗಿಪೇಟೆ ನೇತ್ರಾವತಿ ನದಿ ತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ, ಪುದು ಗ್ರಾಮಸ್ಥರಲ್ಲಿ ಆತಂಕ, ತನಿಖೆಗೆ ಆಗ್ರಹ

ಬಂಟ್ವಾಳ : ಫರಂಗಿಪೇಟೆ ಹತ್ತನೇ ಮೈಲ್‌ಕಲ್ಲು ಸಮೀಪದ ನೇತ್ರಾವತಿ ನದಿ ತೀರದಲ್ಲಿ ಪುದು ಗ್ರಾಮದ ನಿವಾಸಿಗಳ ವಿಳಾಸ ಹೊಂದಿರುವ ಆಧಾರ್ ಕಾರ್ಡ್‌ಗಳು ರಾಶಿ ರಾಶಿಯಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮಂಗಳವಾರ ಸಂಜೆ ಸ್ಥಳೀಯರು ನದಿಯಲ್ಲಿ ತೇಲಿ ಬರುತ್ತಿದ್ದ ಆಧಾರ್ ಕಾರ್ಡ್‌ಗಳನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹಲವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪುದು ಗ್ರಾಮದ ಅನೇಕ ಮನೆಗಳ ವಿಳಾಸ ಹೊಂದಿರುವ ಕಾರ್ಡ್‌ಗಳು ನದಿ ಬದಿಯಲ್ಲಿ ಚದುರಿಕೊಂಡಿರುವುದು ಕಂಡುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾಮಸ್ಥರಿಗೆ ಆಧಾರ್ ಕಾರ್ಡ್ ತಲುಪದೆ ಸಾರ್ವಜನಿಕರು ಹಣ ನೀಡಿ ಸೈಬರ್ ಕೇಂದ್ರಗಳಿಂದ ಪ್ರತಿಗಳನ್ನು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸಾವಿರಾರು ಕಾರ್ಡ್‌ಗಳು ನದಿ ತೀರದಲ್ಲಿ ಪತ್ತೆಯಾಗಿರುವುದು ಗಂಭೀರ ವಿಷಯವಾಗಿದ್ದು, ಇದರ ಹಿಂದೆ ಯಾರು ಎಂಬುದನ್ನು ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಸ್ಥಳೀಯ ಶಾಸಕರಿಗೂ ಗ್ರಾಮ ಪಂಚಾಯತ್ ವತಿಯಿಂದ ದೂರು ಸಲ್ಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಅಂಚೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಹಾಗೂ
ಘಟನೆ ಕುರಿತು ಸಂಬಂಧಪಟ್ಟ ಇಲಾಖೆ ತಕ್ಷಣ ತನಿಖೆ ಆರಂಭಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.