ಡೈಲಿ ವಾರ್ತೆ: ಮಾ./05/2026

ಬ್ರಹ್ಮಾವರ: ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಕೋಟ್ಯಂತರ ರೂಪಾಯಿ ವಂಚನೆ; ನಂಬಿಕಸ್ತ ನೌಕರನಿಂದಲೇ ಪಂಗನಾಮ! ಮೂವರ ವಿರುದ್ಧ ದೂರು ದಾಖಲು

​ಬ್ರಹ್ಮಾವರ: ಕೆಲಸಕ್ಕೆ ಇದ್ದ ನಂಬಿಕಸ್ತ ನೌಕರನೇ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಮಾಲಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಘಟನೆ ಬ್ರಹ್ಮಾವರದ ಶಿರಿಯಾರದಲ್ಲಿ ನಡೆದಿದೆ.

ವಿಶ್ವಂಬರ ಕ್ಯಾಶ್ಯೂ ಇಂಡಸ್ಟ್ರೀಸ್‌ನಲ್ಲಿ ಸುಮಾರು 1.61 ಕೋಟಿ ರೂಪಾಯಿ ಮೌಲ್ಯದ ದಾಸ್ತಾನು ಅಕ್ರಮವಾಗಿ ಮಾರಾಟ ಮಾಡಿ ವಂಚಿಸಿದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

​ಶಿರಿಯಾರ ನಿವಾಸಿ ಎಸ್. ಯೋಗೀಶ್ ಎಂಬವರು ವಿಶ್ವಂಬರ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಮಾಲಕರಾಗಿದ್ದು, ತೆಂಗಿನಕಾಯಿ, ಕೊಬ್ಬರಿ, ಅಡುಗೆ ಎಣ್ಣೆ ಮತ್ತು ಗೇರುಬೀಜದ ವ್ಯವಹಾರ ನಡೆಸುತ್ತಿದ್ದಾರೆ. ಇವರ ಸಂಸ್ಥೆಯಲ್ಲಿ ಲೆಕ್ಕಪತ್ರ ನಿರ್ವಹಣೆ ಮತ್ತು ದಾಸ್ತಾನು ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ರತೀಶ್ ಎಂಬಾತನೇ ಈ ವಂಚನೆಯ ಮಾಸ್ಟರ್ ಮೈಂಡ್ ಎನ್ನಲಾಗಿದೆ.

​ದೂರಿನಲ್ಲಿ ಉಲ್ಲೇಖಿಸಿರುವಂತೆ, ಒಂದನೇ ಆರೋಪಿ ರತೀಶ್ ತನ್ನ ಸ್ನೇಹಿತರಾದ ರಾಜೇಶ್ (2ನೇ ಆರೋಪಿ), ಸುಮಂತ್ (3ನೇ ಆರೋಪಿ) ಮತ್ತು ಇತರರೊಂದಿಗೆ ಕೈಜೋಡಿಸಿ ಈ ಕೃತ್ಯ ಎಸಗಿದ್ದಾನೆ.
ಏಪ್ರಿಲ್ 2023 ರಿಂದ ಜೂನ್ 2025 ರ ಅವಧಿಯಲ್ಲಿ ಹಂತ ಹಂತವಾಗಿ ವಂಚನೆ ಎಸಗಲಾಗಿದೆ ಎಂದು ತಿಳಿದು ಬಂದಿದೆ.

ಕಳುವಾದ ದಾಸ್ತಾನು:
56,01,600 ರೂ. ಮೌಲ್ಯದ 24,896 ಕೆಜಿ ಕೊಬ್ಬರಿ ಹಾಗೂ 1,05,72,900 ರೂ. ಮೌಲ್ಯದ 1,62,660 ಕೆಜಿ ತೆಂಗಿನಕಾಯಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ.
​ಒಟ್ಟು ಮೊತ್ತ: ಸುಮಾರು 1,61,74,500 ರೂಪಾಯಿಗಳನ್ನು ಸಂಸ್ಥೆಗೆ ಜಮಾ ಮಾಡದೆ ಆರೋಪಿಗಳು ತಮ್ಮ ಸ್ವಂತಕ್ಕೆ ಬಳಸಿಕೊಂಡು ವಂಚಿಸಿದ್ದಾರೆ ಎಂದು ಪಿರ್ಯಾದಿದಾರರು ತಿಳಿಸಿದ್ದಾರೆ. ಸಂಸ್ಥೆಯ ಲೆಕ್ಕಪತ್ರದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಈ ಬೃಹತ್ ಹಗರಣ ಬೆಳಕಿಗೆ ಬಂದಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 42/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 316(3), (4), 323 ಜೊತೆಗೆ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.