

ಡೈಲಿ ವಾರ್ತೆ:JAN/18/2026

ಪೊಲೀಸರೇ ಅಪರಾಧದಲ್ಲಿ ಭಾಗಿ: ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ 88 ಅಪರಾಧ ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕಿಡಿಕಾರಿದ್ದಾರೆ.

ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಇಲಾಖೆಯ ವೈಫಲ್ಯಗಳನ್ನು ಎತ್ತಿ ತೋರಿಸಿ ತರಾಟೆಗೆತ್ತಿಕೊಂಡರು. ಇಂತಹ ಕೃತ್ಯಗಳು ಸರಕಾರ ಮತ್ತು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತಂದಿವೆ. ಡಿವೈಎಸ್ಪಿ, ಎಸಿಪಿ, ಇನ್ಸ್ ಪೆಕ್ಟರ್, ಪಿಎಸ್‌ಐಗಳ ಗಮನಕ್ಕೆ ಬಾರದೆ ಯಾವುದೇ ಕೃತ್ಯಗಳು ನಡೆಯಲ್ಲ. ಪೊಲೀಸರು ಬದ್ಧತೆಯಿಂದ ಕೆಲಸ ಮಾಡಿದ್ರೆ ಹೀಗೆಲ್ಲ ಆಗುತ್ತಾ.. ಅಪರಾಧ ಕೃತ್ಯಗಳು ಘಟಿಸುವ ಮುನ್ನವೇ ಎಚ್ಚರ ವಹಿಸಬೇಕು. ಅದು ಪೊಲೀಸರ ಕೆಲಸ ಅಲ್ವೇನ್ರಿ ಎಂದು ಪ್ರಶ್ನೆ ಮಾಡಿದರು.
ಡ್ರಗ್ಸ್ ಫ್ಯಾಕ್ಟರಿ’ ರಾಜ್ಯ ಪೊಲೀಸರಿಗೇಕೆ ಗೊತ್ತಾಗಲ್ಲ: ಡ್ರಗ್ಸ್ ದಂಧೆ ಮಟ್ಟ ಹಾಕುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮೈಸೂರು, ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂದು ಪತ್ತೆ ಮಾಡುತ್ತಾರೆ, ನಮ್ಮ ಪೊಲೀಸರಿಗೆ ಇದು ಏಕೆ ಗೊತ್ತಾಗುವುದಿಲ್ಲ. ಇದು ಇಲಾಖೆಯ ವೈಫಲ್ಯ ಎಂದು ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕಿಡಿಕಾರಿದ್ದಾರೆ.
ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದಕ್ಕಾಗಿ ಪೊಲೀಸರು ಸಮಾರೋಪಾದಿ ಕೆಲಸ ಮಾಡಬೇಕು. ಡ್ರಗ್ಸ್ ದಂಧೆಯ ಮೂಲ ಬೇರುಗಳನ್ನು ಪತ್ತೆ ಹಚ್ಚಬೇಕು. ವ್ಯಸನಿಗಳು ಹಾಗೂ ಮಾರಾಟಗಾರರನ್ನು ಬಂಧಿಸಿ ತೀವ್ರ ವಿಚಾರಣೆ ಮಾಡಿದರೆ ಅದರ ಮೂಲ ಬೇರುಗಳು ಪತ್ತೆಯಾಗಲ್ವಾ. ನಮ್ಮ ಕರ್ನಾಟಕ ಪೊಲೀಸ್ ಇಲಾಖೆಗೆ ಇಡೀ ದೇಶದಲ್ಲಿ ಗೌರವ ಇದೆ, ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಿ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ವಿದೇಶಿಗರನ್ನು ಕೂಡಲೇ ಪತ್ತೆಹಚ್ಚಿ ಅವರನ್ನು ಗಡಿಪಾರು ಮಾಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.