ಡೈಲಿ ವಾರ್ತೆ:JAN/20/2026

ಬಂಟ್ವಾಳ: ಕೇಂದ್ರ ಸರಕಾರ ಜನರಲ್ಲಿ ಗೊಂದಲ ಮೂಡಿಸುತ್ತಿದೆ – ಮಾಜಿ ಸಚಿವ ಬಿ. ರಮಾನಾಥ ರೈ

ಬಂಟ್ವಾಳ: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ, ಆಹಾರ ಭದ್ರತಾ ಕಾಯ್ದೆ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು ಕಾಯ್ದೆಗಳನ್ನು ಜಾರಿಗೆ ತಂದು ಕಾಂಗ್ರೆಸ್ ಪಕ್ಷ ಜನರಿಗೆ ನೇರ ಹಕ್ಕುಗಳನ್ನು ನೀಡಿದೆ. ಸ್ವಚ್ಛ ಗ್ರಾಮ ಯೋಜನೆಯೂ ಕಾಂಗ್ರೆಸ್ ಸರ್ಕಾರದ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯ ನಾಮ ಬದಲಾವಣೆಯಷ್ಟೇ ಆಗಿದೆ. ಬಿಜೆಪಿ ಕೇವಲ ಯೋಜನೆಗಳ ಹೆಸರು ಬದಲಾವಣೆ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪಿಸಿದರು.

ಬಿ.ಸಿ.ರೋಡಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಮಾತ್ರವಲ್ಲದೆ, ಈ ಹಿಂದೆ ಕೇಂದ್ರ ಸರಕಾರ ಶೇ.100ರಷ್ಟು ಅನುದಾನ ನೀಡುತ್ತಿದ್ದ ಯೋಜನೆಯನ್ನು ಇದೀಗ ಕೇಂದ್ರ–ರಾಜ್ಯಗಳ ನಡುವೆ 60:40 ಅನುಪಾತಕ್ಕೆ ಬದಲಾಯಿಸಿ ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿ ಭಾರ ಹಾಕಲಾಗಿದೆ ಎಂದರು.
ಜಿ.ಎಸ್.ಟಿ ಜಾರಿಯಿಂದ ತೆರಿಗೆ ಸಂಗ್ರಹ ನೇರವಾಗಿ ಕೇಂದ್ರ ಸರಕಾರದ ವಶವಾಗಿದ್ದು, ರಾಜ್ಯ ಸರಕಾರಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ತೆರಿಗೆ ಹಂಚಿಕೆಯಲ್ಲಿ ರಾಜ್ಯಗಳಿಗೆ ಸಮರ್ಪಕ ಪಾಲು ನೀಡಲಾಗುತ್ತಿಲ್ಲ. ಇದೀಗ ಉದ್ಯೋಗ ಖಾತರಿ ಯೋಜನೆಯಲ್ಲೂ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು.

ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಹೋರಾಟ ಹಮ್ಮಿಕೊಂಡಿದೆ. ಇದರ ಅಂಗವಾಗಿ ಜನವರಿ 27ರಂದು ಬೆಳಿಗ್ಗೆ 9.30ಕ್ಕೆ ಮಣಿಹಳ್ಳದಿಂದ ಬಿ.ಸಿ.ರೋಡು–ಕೈಕಂಬದವರೆಗೆ ಪಾದಯಾತ್ರೆ ನಡೆಯಲಿದ್ದು, ಬಳಿಕ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಲಿದೆ ಎಂದರು.

ಹೋರಾಟಕ್ಕೂ ಮುನ್ನ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮ ಮಟ್ಟದಲ್ಲಿ ಒಂದು ಕಿಲೋಮೀಟರ್ ಪಾದಯಾತ್ರೆ ನಡೆಸಿ, ಕಾಂಗ್ರೆಸ್ ಬೆಂಬಲಿತ ಆಡಳಿತ ಇರುವ ಗ್ರಾಮಗಳಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಹಾಗೂ ಇತರ ಕಡೆಗಳಲ್ಲಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಪ್ರತಿಭಟನೆಗಳಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು, ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ತಮ್ಮ ಶಾಸಕ ಹಾಗೂ ಸಚಿವ ಅವಧಿಯಲ್ಲಿ ಅನುಮೋದನೆಗೊಂಡ ಬಂಟ್ವಾಳ ತಾಲೂಕು ಕ್ರೀಡಾಂಗಣ, ಪಂಜೆ ಮಂಗೇಶರಾಯರ ಭವನ, ಅಜಿಲಮೊಗರು–ಕಡೇಶ್ವಾಲ್ಯ ಸೌಹಾರ್ದ ಸೇತುವೆ ಮೊದಲಾದ ಪ್ರಮುಖ ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವುದು ಬೇಸರ ತಂದಿದೆ ಎಂದು ಹೇಳಿದ ಅವರು, ಸರಕಾರದೊಂದಿಗೆ ಚರ್ಚಿಸಿ ಕಾಮಗಾರಿಗಳ ಮುಂದುವರಿಕೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಬ್ಲಾಕ್ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪಕ್ಷದ ಪ್ರಮುಖರಾದ ಬಿ. ಪದ್ಮಶೇಖರ ಜೈನ್, ಸುದರ್ಶನ್, ಲುಕ್ಮಾನ್ ಬಿ.ಸಿ.ರೋಡು, ಲವೀನಾ ವಿಲ್ಮಾ ಮೊರಾಸ್, ಮಲ್ಲಿಕಾ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.