
ಡೈಲಿ ವಾರ್ತೆ:JAN/20/2026
ಹೊಸಬೀಡು: ಫೆ.2ರಂದು ಶ್ರೀ ಗಂಗಾಧರೇಶ್ವರ ದೇಗುಲ ಗರ್ಭನ್ಯಾಸ ಹಾಗೂ ಧಾರ್ಮಿಕ ಕಾರ್ಯಕ್ರಮ

- ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ.
ಹೊಸಬೀಡು (ಶಿವಮೊಗ್ಗ): ಮಲೆನಾಡಿನ ತಪ್ಪಲಿನಲ್ಲಿ ಲಿಂಗಸ್ವರೂಪಿಯಾಗಿ ನೆಲೆ ನಿಂತು ಸುತ್ತಮುತ್ತಲ ಹತ್ತೂರಿನ ಭಕ್ತರಿಗೆ ಇಷ್ಟಾರ್ಥಸಿದ್ಧಿಯನ್ನು ನೀಡುತ್ತಿರುವ ಪುರಾಣ ಪ್ರಸಿದ್ಧ ಐತಿಹಾಸಿಕ ದೇಗುಲಗಳಲ್ಲೊಂದಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿಯ ಸಮೀಪದ ಚಕ್ರನಗರದ ಕರಿಮನೆಯ ಹೊಸಬೀಡು ಗ್ರಾಮದಲ್ಲಿನ ಶ್ರೀ ಗಂಗಾಧರೇಶ್ವರ ದೇಗುಲದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಗರ್ಭನ್ಯಾಸ (ದಾರಂದಪೂಜೆ) ವಿಧಿಯನ್ನು ಫೆಬ್ರವರಿ 2ರಂದು (ಸೋಮವಾರ) ಬೆಳಿಗ್ಗೆ 10.34ಕ್ಕೆ ಒದಗುವ ಶುಭ ಮುಹೂರ್ತದಲ್ಲಿ ನೆರವೇರಿಸಲಾಗುವುದು.
ಪೂಜ್ಯ ಶ್ರೀ ವಿಶ್ವೇಶ್ವರ ಭಟ್, ಉಡುಪಿ ಇವರ ದಿವ್ಯ ಅಮೃತ ಹಸ್ತದೊಂದಿಗೆ ಹಾಗೂ ಆಶೀರ್ವಚನದೊಂದಿಗೆ ಪುನರ್ ನಿರ್ಮಾಣಗೊಳ್ಳುತ್ತಿರುವ ಶ್ರೀ ಗಂಗಾಧರೇಶ್ವರ ದೇವರ ಗರ್ಭಗೃಹ ನಿರ್ಮಾಣಾಂಗದ ಗರ್ಭನ್ಯಾಸ ವಿಧಿ ನೆರವೇರಲಿದೆ. ಇದೇ ವೇಳೆ ದೇಗುಲದ ಸಹ ಪರಿವಾರ ದೇವರುಗಳ ಜೀರ್ಣೋದ್ಧಾರ ಕಾರ್ಯಗಳೂ ನಡೆಯಲಿವೆ.
ಅದೇ ದಿನ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ವಿವಿಧ ಧಾರ್ಮಿಕ ವಿಧಿ ವಿಧಾನಗಳು, ದೇಗುಲ ನಿರ್ಮಾಣಕ್ಕೆ ಸಹಕರಿಸಿದ ಗಣ್ಯರಿಗೆ ಅಭಿನಂದನಾ ಪ್ರಶಸ್ತಿ ಪ್ರದಾನ, ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಪೂಜಾ ಕಾರ್ಯಗಳು ಸನ್ನಿಧಾನದಲ್ಲಿ ನಡೆಯಲಿವೆ.
ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಊರಿನ ಹಾಗೂ ಪರವೂರಿನ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗಂಗಾಧರೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗಂಗಾಧರೇಶ್ವರ ದೇವಸ್ಥಾನ (ರಿ.) ಹೊಸಬೀಡು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು, ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಹೊಸಬೀಡು–ಕರಿಮನೆ ಗ್ರಾಮದ ಸಮಸ್ತ ಸದ್ಭಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.