ಡೈಲಿ ವಾರ್ತೆ:JAN/20/2026

ಪುತ್ತೂರಿನಲ್ಲಿ ಭಾರೀ ಗಾಂಜಾ ಸಾಗಾಟ ಪತ್ತೆ: 106 ಕೆಜಿ ಗಾಂಜಾ ವಶ, ಇಬ್ಬರು ಬಂಧನ

ಪುತ್ತೂರು, ಜನವರಿ 20: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಜನವರಿ 19ರ ಸಂಜೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸಜಂಕಾಡಿ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ 106 ಕಿಲೋಗ್ರಾಂ 60 ಗ್ರಾಂ ಗಾಂಜಾ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಉಪನಿರೀಕ್ಷಕ ಗುಣಪಾಲ ಜೆ. ನೇತೃತ್ವದ ತಂಡವು ಕಾರು ಮತ್ತು ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ತಪಾಸಣೆಗೆ ನಿಲ್ಲಿಸಿತು. ಕಾರು ಚಾಲಕ ರಫೀಕ್ ಪಿ. (37), ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಕಾರು ಪರಿಶೀಲನೆಯ ವೇಳೆ ಪ್ಲಾಸ್ಟಿಕ್ ಕವರ್‌ನಲ್ಲಿ ಸುಮಾರು 100 ಗ್ರಾಂ ತೂಕದ ಗಾಂಜಾ ಎಲೆ, ಹೂ ಹಾಗೂ ಕಾಯಿ ಪತ್ತೆಯಾಯಿತು.

ಗೂಡ್ಸ್ ವಾಹನ ಚಾಲಕ ಅಬ್ದುಲ್ ಸಾದಿಕ್ (37), ಚಾರ್ಮಾಡಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದ್ದು, ವಾಹನ ಪರಿಶೀಲಿಸಿದಾಗ 73 ಕಟ್ಟುಗಳಲ್ಲಿ ಒಟ್ಟು 106 ಕಿಲೋಗ್ರಾಂ 60 ಗ್ರಾಂ ಗಾಂಜಾ ಪತ್ತೆಯಾಗಿದೆ. ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ರೂ. 53.03 ಲಕ್ಷ ಎಂದು ಅಂದಾಜಿಸಲಾಗಿದೆ.

ಪ್ರಾಥಮಿಕ ವಿಚಾರಣೆಯಲ್ಲಿ ಗಾಂಜಾವನ್ನು ಕೇರಳ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಗಾಂಜಾ ಸಾಗಾಟಕ್ಕೆ ಬಳಸಿದ್ದ ಎರಡು ವಾಹನಗಳು ಹಾಗೂ ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ (NDPS Act 1985) ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.