ಡೈಲಿ ವಾರ್ತೆ:JAN/20/2026

ಸರಸ್ವತಿ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ಅನೈತಿಕ ಚಟುವಟಿಕೆಗಳ ಹಾವಳಿ:
ಕರವೇಯಿಂದ ಪೊಲೀಸ್ ವರಿಷ್ಠಾಧಿಕಾರಿಗೆ ದೂರು

ಉಡುಪಿ, ಜ.20: ಉಡುಪಿ ನಗರದ ಹೃದಯ ಭಾಗದಲ್ಲಿರುವ ಸರಸ್ವತಿ ಕನ್ನಡ ಮಾಧ್ಯಮ ಶಾಲೆಯ ಆವರಣವು ಇತ್ತೀಚಿನ ದಿನಗಳಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಶಾಲಾ ಆವರಣದಲ್ಲಿ ರಾತ್ರಿಯ ಸಮಯದಲ್ಲಿ ಕುಡುಕರ ಹಾಗೂ ತೃತೀಯ ಲಿಂಗಿಗಳ ಹಾವಳಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಕಾಂಡೊಮ್‌ಗಳು ಬಿದ್ದಿರುವುದರಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ, ಆವರಣದಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ಸುತ್ತಮುತ್ತಲಿನ ಪ್ರದೇಶ ಕತ್ತಲಾಗಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ವಿದ್ಯುತ್ ದೀಪಗಳನ್ನು ಅಳವಡಿಸಿದರೂ ಅವುಗಳನ್ನು ಒಡೆದು ಹಾಕಿ ರಾಜಾರೋಷವಾಗಿ ಅವ್ಯವಹಾರ ನಡೆಸಲಾಗುತ್ತಿದೆ ಎನ್ನಲಾಗಿದೆ.

ಈ ಪ್ರದೇಶದಲ್ಲಿ ಹೊಡೆದಾಟ–ಬಡಿದಾಟ ಸಾಮಾನ್ಯವಾಗಿದ್ದು, ಪೊಲೀಸರು ಎಚ್ಚರಿಕೆ ನೀಡಿದರೂ ಕೂಡ ದುಷ್ಕರ್ಮಿಗಳು ಮರುಕಳಿಸಿ ಅದೇ ಸ್ಥಳದಲ್ಲಿ ಹಾವಳಿ ನಡೆಸುತ್ತಿದ್ದಾರೆ. ಪರಿಣಾಮವಾಗಿ ಸಾರ್ವಜನಿಕರು ರಾತ್ರಿಯ ವೇಳೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರವೇ ತಿಳಿಸಿದೆ.

ಈ ಸಮಸ್ಯೆಗೆ ತಕ್ಷಣ ಸೂಕ್ತ ಕ್ರಮ ಕೈಗೊಂಡು ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸುರಕ್ಷಿತಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಸೇರಿಗಾರ್ತಿ, ಉಪಾಧ್ಯಕ್ಷೆ ದೇವಕಿ ಬಾರ್ಕೂರು, ಜಯಪ್ರಕಾಶ್ ಶೆಟ್ಟಿ, ನಾಗರಾಜ್, ಗಣೇಶ್ ರಮೇಶ್, ಸವಿತಾ, ಆಶಾ ಮೊದಲಾದವರು ಉಪಸ್ಥಿತರಿದ್ದರು.