

ಡೈಲಿ ವಾರ್ತೆ:JAN/21/2026


ಭದ್ರಾವತಿಯಲ್ಲಿ ವಯೋವೃದ್ಧ ದಂಪತಿ ಅನುಮಾನಾಸ್ಪದ ಸಾವು: ಚಿನ್ನಾಭರಣ ನಾಪತ್ತೆ, ದರೋಡೆ-ಹತ್ಯೆ ಶಂಕೆ

ಶಿವಮೊಗ್ಗ: ಭದ್ರಾವತಿ ನಗರದ ಭೂತನಗುಡಿ ಬಡಾವಣೆಯಲ್ಲಿ ವಯೋವೃದ್ಧ ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೃತರನ್ನು ವಿಐಎಸ್‌ಎಲ್‌ನ ನಿವೃತ್ತ ನೌಕರ ಚಂದ್ರಪ್ಪ (78) ಹಾಗೂ ಅವರ ಪತ್ನಿ ಜಯಮ್ಮ (75) ಎಂದು ಗುರುತಿಸಲಾಗಿದೆ.
ಪ್ರತಿದಿನ ಬೆಳಗ್ಗೆ ವಾಯುವಿಹಾರಕ್ಕೆ ತೆರಳುತ್ತಿದ್ದ ದಂಪತಿ ಜ.20ರ ಬೆಳಗ್ಗೆ ಮನೆಯಿಂದ ಹೊರಬರದೇ ಇದ್ದುದರಿಂದ ಅನುಮಾನಗೊಂಡ ನೆರೆಹೊರೆಯವರು ಮನೆಗೆ ತೆರಳಿ ನೋಡಿದಾಗ, ಇಬ್ಬರೂ ಸಾವನ್ನಪ್ಪಿರುವುದು ಪತ್ತೆಯಾಗಿದೆ.
ಮನೆಯ ಕೋಣೆಯ ಹಾಸಿಗೆಯ ಮೇಲೆ ಚಂದ್ರಪ್ಪ ಅವರ ಮೃತದೇಹ ಪತ್ತೆಯಾಗಿದ್ದು, ಜಯಮ್ಮ ಅವರ ಮೃತದೇಹ ಮನೆಯ ಹಾಲ್‌ನಲ್ಲಿ ಕಂಡುಬಂದಿದೆ. ಮೃತರ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲವೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಜಯಮ್ಮ ಅವರ ಮೇಲೆ ಇದ್ದ ಬಂಗಾರದ ಚೈನ್ ಸೇರಿದಂತೆ ಮನೆಯಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಶಂಕೆಗೆ ಕಾರಣವಾಗಿದೆ.
ಜ.19ರಂದು ದಂಪತಿ ಹೊಸದಾಗಿ ಚಿನ್ನಾಭರಣ ಖರೀದಿಸಿ ತಂದಿದ್ದರು ಎನ್ನಲಾಗಿದೆ. ಮೃತ ದಂಪತಿಗೆ ಮೂರು ಮಂದಿ ಪುತ್ರರು ಇದ್ದು, ಶಿವಮೊಗ್ಗದ ಶಾಲೆಯೊಂದರ ಮುಖ್ಯ ಶಿಕ್ಷಕ ಆದರ್ಶ್, ಸಿದ್ದಾಪುರ–ಹೊಸೂರು ಸರ್ಕಾರಿ ಉರ್ದು ಶಾಲೆಯ ಶಿಕ್ಷಕ ರವಿಕುಮಾರ್ ಹಾಗೂ ದಾವಣಗೆರೆ ಶುಗರ್ಸ್‌ನಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವನಾಥ್ ಅವರಾಗಿದ್ದಾರೆ. ಶನಿವಾರ ಮಕ್ಕಳು ಪೋಷಕರನ್ನು ಭೇಟಿಯಾಗಿ ಮನೆಗೆ ತೆರಳಿದ್ದರು. ಬಳಿಕ ಫೋನ್ ಕರೆ ಸ್ವೀಕರಿಸದ ಕಾರಣ ಆತಂಕಗೊಂಡ ಮಕ್ಕಳು ಸ್ಥಳೀಯರಿಗೆ ಮಾಹಿತಿ ನೀಡಿ ಮನೆ ಪರಿಶೀಲನೆಗೆ ಕೋರಿದ್ದರು.
ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಪ್ಪ, ಡಿವೈಎಸ್‌ಪಿ ಪ್ರಕಾಶ್ ರಾಥೋಡ್, ಸರ್ಕಲ್ ಇನ್ಸ್‌ಪೆಕ್ಟರ್ ಚಿದಾನಂದ್, ಹಳೇನಗರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸುನಿಲ್ ತೇಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ದಾವಣಗೆರೆಯಿಂದ ಬಂದ ವಿಶೇಷ ತಂಡಗಳು ಸ್ಥಳದಲ್ಲಿ ತನಿಖೆ ಕೈಗೊಂಡಿವೆ.
ಮನೆಗೆ ನುಗ್ಗಿದ ದುಷ್ಕರ್ಮಿಗಳು ದರೋಡೆ ನಡೆಸಿ ದಂಪತಿಯನ್ನು ಹತ್ಯೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಹಳೇನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.