
ಡೈಲಿ ವಾರ್ತೆ:JAN/21/2026
ಟಾಟಾ ಏಸ್–ಪಿಕಪ್ ಮುಖಾಮುಖಿ ಡಿಕ್ಕಿ, ಐವರು ಸಾವು

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿವಾಳ ಕ್ರಾಸ್ ಬಳಿ ಟಾಟಾ ಏಸ್ ಹಾಗೂ ಮಹೀಂದ್ರಾ ಬೊಲೆರೊ ಪಿಕಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ದುರ್ಘಟನೆ ನಡೆದಿದೆ.
ಮೃತರನ್ನು ಬಳ್ಳಾರಿ ಜಿಲ್ಲೆಯ ಚೆಳ್ಳೆ ಕೂಡ್ಲೂರು ನಿವಾಸಿಗಳಾದ ಸಣ್ಣ ಯಲ್ಲಯ್ಯ (40), ಅವರ ಪುತ್ರ ರಂಗನಾಥ್ (15), ಹರಿ (36), ಮಲ್ಲಯ್ಯ ಮಧುರಿ (50) ಎಂದು ಗುರುತಿಸಲಾಗಿದೆ. ಇನ್ನೋರ್ವ ಮೃತನ ಗುರುತು ಪತ್ತೆಯಾಗಿಲ್ಲ. ಮೃತರಲ್ಲಿ ಸಣ್ಣ ಯಲ್ಲಯ್ಯ ಹಾಗೂ ರಂಗನಾಥ ತಂದೆ–ಮಗನಾಗಿದ್ದಾರೆ ಎಂಬುದು ತಿಳಿದು ಬಂದಿದೆ.
ಸಿಂಧನೂರಿನಿಂದ ಕುರಿ ಸಂತೆ ಮುಗಿಸಿಕೊಂಡು ಬಳ್ಳಾರಿ ಕಡೆಗೆ ತೆರಳುತ್ತಿದ್ದ ಟಾಟಾ ಏಸ್ ವಾಹನಕ್ಕೆ ವಿರುದ್ಧ ದಿಕ್ಕಿನಿಂದ ಬಂದ ಮಹೀಂದ್ರಾ ಬೊಲೆರೊ ಪಿಕಪ್ ಡಿಕ್ಕಿ ಹೊಡೆದಿದೆ. ಟಾಟಾ ಏಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಂಟು ಜನರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಟಾಟಾ ಏಸ್‌ನಲ್ಲಿ ಸಾಗಿಸುತ್ತಿದ್ದ ಕುರಿಗಳು ಸಹ ಸಾವನ್ನಪ್ಪಿವೆ.
ಟಾಟಾ ಏಸ್‌ನಲ್ಲಿದ್ದ ಮೂವರು ಗಾಯಾಳುಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಿಕಪ್ ವಾಹನದಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.