
ಡೈಲಿ ವಾರ್ತೆ:JAN/21/2026
ಮಹಿಳೆಯರ ಒಳಉಡುಪು ಕಳವು ಮಾಡಿ ವಿಕೃತ ಕೃತ್ಯ: ಹೆಬ್ಬಗೋಡಿಯಲ್ಲಿ ಯುವಕನ ಬಂಧನ

ಬೆಂಗಳೂರು: ಮಹಿಳೆಯರ ಒಳಉಡುಪುಗಳನ್ನು ಕಳವು ಮಾಡಿ ವಿಕೃತ ಕೃತ್ಯಗಳಲ್ಲಿ ತೊಡಗಿದ್ದ ವ್ಯಕ್ತಿಯನ್ನು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯನ್ನು ಕೇರಳ ಮೂಲದ ಅಮಲ್ (23) ಎಂದು ಗುರುತಿಸಲಾಗಿದೆ. ಈತ ಮನೆಗಳ ಮಹಡಿಗಳಲ್ಲಿ ಹಾಗೂ ಮನೆಯ ಹೊರಭಾಗದಲ್ಲಿ ಒಣಹಾಕಿದ್ದ ಮಹಿಳೆಯರ ಒಳಉಡುಪುಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದನು. ಮೊದಲು ಹೊರಗಡೆ ಸುತ್ತಾಡುತ್ತಾ ಮನೆಗಳನ್ನು ದೂರದಿಂದಲೇ ಪರಿಶೀಲನೆ ನಡೆಸಿ, ಮನೆಯಲ್ಲೇ ಯಾರೂ ಇಲ್ಲದ ಸಮಯದಲ್ಲಿ ಒಳ ನುಗ್ಗಿ ಒಳಉಡುಪುಗಳನ್ನು ಕದ್ದೊಯ್ಯುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ಒಳಉಡುಪುಗಳನ್ನು ತಾನು ಧರಿಸಿಕೊಂಡು ಫೋಟೋ ತೆಗೆದುಕೊಂಡು ವಿಕೃತ ಆನಂದ ಪಡುತ್ತಿದ್ದನೆಂಬ ಅಂಶ ವಿಚಾರಣೆಯ ವೇಳೆ ಬಹಿರಂಗವಾಗಿದೆ.
ಆರೋಪಿಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ನಲ್ಲಿ ಕದ್ದ ಒಳಉಡುಪುಗಳನ್ನು ಧರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿರುವ ದೃಶ್ಯಗಳು ಪತ್ತೆಯಾಗಿವೆ.
ಇದಲ್ಲದೆ, ಅಮಲ್ ವಾಸವಿದ್ದ ಮನೆಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರ ಒಳಉಡುಪುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವುದು ಪೊಲೀಸರ ಪರಿಶೀಲನೆಯಲ್ಲಿ ಪತ್ತೆಯಾಗಿದೆ.
ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ಇತರ ಪ್ರದೇಶಗಳಲ್ಲೂ ಇಂತಹ ಕೃತ್ಯಗಳಲ್ಲಿ ಈತನ ಭಾಗವಹಿಸುವಿಕೆ ಇದೆಯೇ ಎಂಬ ಕುರಿತು ತನಿಖೆ ಮುಂದುವರಿಸಿದ್ದಾರೆ.