ಡೈಲಿ ವಾರ್ತೆ:JAN/21/2026

ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ: ಕುಂದಾಪುರ ಮೂಲದ ಯುವಕ ಸೇರಿ ಇಬ್ಬರು ಮೃತ್ಯು

ಸೌದಿ ಅರೇಬಿಯಾದ ಅಭಾ–ಜಿಜಾನ್ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರ ಮೂಲದ ಯುವಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಕುಂದಾಪುರ ತಾಲೂಕಿನ ಕೋಟೇಶ್ವರ ಮೆಜಸ್ಟಿಕ್ ಹಾಲ್‌ನ ಪಾಲುದಾರ ಇರ್ಷಾದ್ ಅವರ ಏಕೈಕ ಪುತ್ರ ಅಮ್ಮಾರ್ ಅಹಮ್ಮದ್ ಶೇಖ್ (25) ಹಾಗೂ ಕೇರಳ ಮೂಲದ ಇನ್ನೊಬ್ಬ ಯುವಕ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


ಸೌದಿ ಅರೇಬಿಯಾದ ಸೆಂಟರ್ ಪಾಯಿಂಟ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ನಾಲ್ವರು ಕೆಲಸದ ನಿಮಿತ್ತ ಅಭಾಕ್ಕೆ ಪ್ರಯಾಣಿಸುತ್ತಿದ್ದಾಗ, ಎದುರಿನಿಂದ ಬಂದ ಸೌದಿ ಪ್ರಜೆಯ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.


ಅಪಘಾತದ ಮಾಹಿತಿ ತಿಳಿದ ತಕ್ಷಣ ಮೃತರ ಸಂಬಂಧಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಘಟನೆ ನಡೆದ ಸ್ಥಳಕ್ಕೆ ತೆರಳಿದ್ದು, ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಸೌದಿ ಅರೇಬಿಯಾ ಸರ್ಕಾರ ಗಾಯಾಳುಗಳ ಹಾಗೂ ಮೃತರ ಕುಟುಂಬವನ್ನು ಸಂಪರ್ಕಿಸಿ, ಮುಂದಿನ ಕಾನೂನು ಹಾಗೂ ಅಧಿಕೃತ ಕ್ರಮಗಳಿಗೆ ಅಗತ್ಯ ಸಹಕಾರ ನೀಡುತ್ತಿದೆ ಎಂದು ತಿಳಿದುಬಂದಿದೆ.