
ಡೈಲಿ ವಾರ್ತೆ:JAN/21/2026
ಭದ್ರಾವತಿಯಲ್ಲಿ ಬೆಚ್ಚಿಬೀಳಿಸುವ ದ್ವಿಹತ್ಯೆ: ಹೆಚ್ಚಿನ ಅನಸ್ತೇಶಿಯಾ ನೀಡಿ ದೊಡ್ಡಪ್ಪ–ದೊಡ್ಡಮ್ಮನ ಹತ್ಯೆ, ವೈದ್ಯನ ಬಂಧನ

ಭದ್ರಾವತಿ:ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ವೃದ್ಧ ದೊಡ್ಡಪ್ಪ ಹಾಗೂ ದೊಡ್ಡಮ್ಮನನ್ನು ಹೆಚ್ಚಿನ ಪ್ರಮಾಣದ ಅನಸ್ತೇಶಿಯಾ ನೀಡಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಡಾ. ಮಲ್ಲೇಶ್ ಎಂದು ಗುರುತಿಸಲಾಗಿದೆ. ಭದ್ರಾವತಿ ಬೂತನ ಗುಡಿ ಸಮೀಪದ ಮನೆಯಲ್ಲಿ ವಾಸವಿದ್ದ ಜಯಮ್ಮ (75) ಹಾಗೂ ಚಂದ್ರಣ್ಣ (78) ಅವರು ಅನುಮಾನಾಸ್ಪದವಾಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು, ಕೊಲೆಯ ಹಿಂದಿರುವ ಭಯಾನಕ ಸತ್ಯವನ್ನು ಬಯಲಿಗೆಳೆದಿದ್ದಾರೆ.
ಪೊಲೀಸರ ತನಿಖೆಯಲ್ಲಿ, ಆರೋಪಿಯು ಚಂದ್ರಣ್ಣ ಅವರ ತಮ್ಮನ ಮಗನೆಂಬುದು ತಿಳಿದುಬಂದಿದೆ. ಆಯುರ್ವೇದಿಕ್ ವೈದ್ಯನಾಗಿದ್ದ ಮಲ್ಲೇಶ್, ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ದೊಡ್ಡಪ್ಪ ಚಂದ್ರಣ್ಣ ಅವರ ಬಳಿ 15 ಲಕ್ಷ ರೂ. ಹಣ ಕೇಳಿದ್ದ. ಆದರೆ ಹಣ ನೀಡಲು ಅವರು ನಿರಾಕರಿಸಿದ್ದರಿಂದ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.
ಚಿಕಿತ್ಸೆ ನೀಡುವುದಾಗಿ ನಂಬಿಸಿ ಜಯಮ್ಮ ಹಾಗೂ ಚಂದ್ರಣ್ಣ ಅವರಿಗೆ ಅಧಿಕ ಪ್ರಮಾಣದ ಅನಸ್ತೇಶಿಯಾ ನೀಡಿದ ಪರಿಣಾಮ ಅವರ ರಕ್ತದೊತ್ತಡ ತೀವ್ರವಾಗಿ ಕುಸಿದು ಇಬ್ಬರೂ ಸಾವನ್ನಪ್ಪಿದ್ದಾರೆ.
ಬಳಿಕ ಆರೋಪಿಯು ಇಬ್ಬರನ್ನು ಬೇರೆ ಬೇರೆ ಕೋಣೆಯಲ್ಲಿ ಮಲಗಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ದೋಚಿದ ಚಿನ್ನವನ್ನು ಅಡವಿಟ್ಟು ಸಾಲ ತೀರಿಸಿದ್ದು, ತನ್ನ ಖಾತೆಯಲ್ಲಿ ಸುಮಾರು 50 ಸಾವಿರ ರೂ. ಉಳಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಯಲ್ಲಿ ಸುಮಾರು 80 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಈ ದಾರುಣ ಘಟನೆಯು ಭದ್ರಾವತಿ ಸೇರಿದಂತೆ ಇಡೀ ಜಿಲ್ಲೆಯಲ್ಲಿ ತೀವ್ರ ಆಘಾತ ಮೂಡಿಸಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.