ಡೈಲಿ ವಾರ್ತೆ:JAN/21/2026

ಕೋಟ| ಉಡುಪ ಸಂಸ್ಮರಣೆ ಹಾಗೂ ಉಡುಪ–ಹಂದೆ ಪ್ರಶಸ್ತಿ ಪ್ರದಾನ: ಯಕ್ಷಗಾನ ಕಲಾವಿದರು ಸಮಾಜಕ್ಕೆ ಮೌಲ್ಯಯುತ ಸಂದೇಶ ನೀಡಬೇಕು – ಜಯಪ್ರಕಾಶ ಹೆಗ್ಡೆ

ಕೋಟ: ಯಕ್ಷಗಾನ ಕಲೆ ಕಲಾವಿದರ ಮೂಲಕ ಸಮಾಜಕ್ಕೆ ಒಳ್ಳೆಯ ಮೌಲ್ಯಗಳು ಹಾಗೂ ಉತ್ತಮ ಸಂದೇಶಗಳನ್ನು ನೀಡುವಂತಾಗಬೇಕು. ಯಾವುದೇ ಕಲಾವಿದ ಪ್ರಸಂಗದ ಚೌಕಟ್ಟನ್ನು ಮೀರಿ ನಡೆದುಕೊಳ್ಳುವುದು ಕಲೆಯ ಬೆಳವಣಿಗೆಗೆ ಮಾರಕವಾಗುತ್ತದೆ ಎಂದು ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಹೇಳಿದರು.
ಅವರು ಜನವರಿ 18ರಂದು, ಆದಿತ್ಯವಾರ ಕೋಟದ ಪಟೇಲರ ಮನೆಯಂಗಣದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ವತಿಯಿಂದ ಆಯೋಜಿಸಲಾದ ಉಡುಪ ಸಂಸ್ಮರಣೆ ಹಾಗೂ ಉಡುಪ–ಹಂದೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕಾರ್ಕಡ ಶ್ರೀನಿವಾಸ ಉಡುಪ ಹಾಗೂ ಶ್ರೀಧರ ಹಂದೆಯವರು ಸಾಲಿಗ್ರಾಮ ಮಕ್ಕಳ ಮೇಳದ ಮೂಲಕ ಕಳೆದ ಐದು ದಶಕಗಳಿಂದ ಕಿರಿಯರಿಂದ ಹಿರಿಯರ ತನಕ ರಸದೌತಣ ನೀಡುತ್ತಾ ಬಂದಿದ್ದಾರೆ. ಉಡುಪ ಹಾಗೂ ಹಂದೆಯವರ ಬದುಕು ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಅವರು ಪ್ರಶಂಸಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ಮೇಳದ ಅಧ್ಯಕ್ಷ ಬಲರಾಮ ಕಲ್ಕೂರ ವಹಿಸಿದ್ದರು. ನಾಡೋಜ ಜಿ. ಶಂಕರ್, ಗೀತಾನಂದ ಫೌಂಡೇಶನ್‌ನ ಆನಂದ ಸಿ. ಕುಂದರ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ, ಕರ್ನಾಟಕ ಬ್ಯಾಂಕ್‌ನ ಹಿರಿಯ ಅಧಿಕಾರಿ ವಾದಿರಾಜ್, ಮಕ್ಕಳ ಮೇಳದ ಸ್ಥಾಪಕ ಶ್ರೀಧರ ಹಂದೆ, ಟ್ರಸ್ಟಿ ಶ್ರೀಧರ ಉಡುಪ ಹಾಗೂ ಶ್ರೀಮತಿ ಕಲ್ಕೂರ ಉಪಸ್ಥಿತರಿದ್ದರು.

ಮಕ್ಕಳ ಮೇಳದ ಪ್ರಾಕ್ತನ ಕಲಾವಿದ ಹಾಗೂ ಮಂದರ್ತಿ ದುರ್ಗಾ ಪರಮೇಶ್ವರಿ ದೇವಾಲಯದ ಅಭಿಯಂತರ ಪ್ರದೀಪ ಶೆಟ್ಟಿ ಉಡುಪ ಸಂಸ್ಮರಣಾರ್ಥ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಮೊಳಹಳ್ಳಿ ಕೃಷ್ಣ ಮೊಗವೀರರಿಗೆ ಉಡುಪ ಪ್ರಶಸ್ತಿ ಹಾಗೂ ಆದರ್ಶ ಶಿಕ್ಷಕ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್ ಅವರಿಗೆ ಹಂದೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಎಚ್. ಸ್ವಾಗತಿಸಿ, ಉಪಾಧ್ಯಕ್ಷ ಜನಾರ್ದನ ಹಂದೆ ವಂದಿಸಿದರು. ಪ್ರಣೂತ್ ಗಾಣಿಗ ಹಾಗೂ ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರ್ವಹಿಸಿದರು. ವಿನಿತ್ ಮತ್ತು ಕಾವ್ಯ ಸಹಕರಿಸಿದರು.
ಆರಂಭದಲ್ಲಿ ದಿವ್ಯ ಕಾರಂತ್ ಹಾಗೂ ಜಯಲಕ್ಷ್ಮಿ ಕಾರಂತ್ ಗಮಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಬಳಿಕ ಗುರು ಪ್ರಸಾದಿತ ಸಾಲಿಗ್ರಾಮ ಮೇಳದ ಕಲಾವಿದರಿಂದ ಕೃಷ್ಣಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಿತು.