ಡೈಲಿ ವಾರ್ತೆ:JAN/21/2026

“ನಾವು ಬಿಜೆಪಿ–ಕಾಂಗ್ರೆಸ್ ಹಿಂದೆಲ್ಲ, ರೈತರ ಹಿಂದೆ ಮಾತ್ರ”: ಸಿದ್ದಾಪುರ ಏತ ನೀರಾವರಿ ತಡೆ ಖಂಡಿಸಿ ಪ್ರತಾಪ್ ಚಂದ್ರ ಶೆಟ್ಟಿ ಆಕ್ರೋಶ

ಸಿದ್ದಾಪುರ: ಸಿದ್ದಾಪುರ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ ತಡೆ ನೀಡಿರುವುದನ್ನು ಖಂಡಿಸಿ ಸಿದ್ದಾಪುರದಲ್ಲಿ ಎಂಟು ಗ್ರಾಮಗಳ ರೈತ ಸಂಘಗಳ ನೇತೃತ್ವದಲ್ಲಿ ಬುಧವಾರ (ಜ.21) ಬೃಹತ್ ಜನಾಗ್ರಹ ಸಭೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಹೋರಾಟ ಸಂಘದ ಮುಂದಾಳು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, “ನಾವು ಯಾವುದೇ ರಾಜಕೀಯ ಪಕ್ಷದ ಹಿಂದೆ ಹೋಗುವುದಿಲ್ಲ. ನಾವು ಸದಾ ರೈತರ ಹಿಂದೆ ಮಾತ್ರ ಹೋಗುತ್ತೇವೆ. ಈ ಸತ್ಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು” ಎಂದು ಸ್ಪಷ್ಟಪಡಿಸಿದರು.
ಈ ಭಾಗದ ರೈತರು ಹಾಗೂ ಅಂಗಡಿಯವರು ಈ ಹಿಂದೆ ಶಂಕರನಾರಾಯಣ ಕಾಲೇಜು, ಭಂಡಾರ್ ಕಾರ್ಸ್ ಕಾಲೇಜು ಸೇರಿದಂತೆ ಹಲವು ಸಂಸ್ಥೆಗಳ ಜೊತೆಗೂಡಿ ಧರಣಿಗಳಲ್ಲಿ ಭಾಗವಹಿಸಿದ್ದನ್ನು ನೆನಪಿಸಿದ ಅವರು, ರೈತ ಹೋರಾಟವು ಪಕ್ಷಾತೀತವಾಗಿದ್ದು ಜನಪರ ಹೋರಾಟವೆಂದು ಹೇಳಿದರು.

“ಇವತ್ತು ಕೆಲವರು ರೈತ ಸಂಘದವರು ಬಿಜೆಪಿ ಹಿಂದೆ ಹೋಗುತ್ತಿದ್ದಾರೆ ಎಂದು ಬುದ್ದಿ ಹೇಳುತ್ತಿದ್ದಾರೆ. ಆದರೆ ನಮ್ಮ ಹೋರಾಟದ ದಿಕ್ಕು ರಾಜಕೀಯವಲ್ಲ, ರೈತರ ಬದುಕು” ಎಂದು ತಿರುಗೇಟು ನೀಡಿದರು.

ರಾಜಕಾರಣಿಗಳ ವಿರುದ್ಧ ಕಿಡಿಕಾರಿದ ಪ್ರತಾಪ್ ಚಂದ್ರ ಶೆಟ್ಟಿ, “ಇವತ್ತಿನ ದಿನಗಳಲ್ಲಿ ಸಮಾಜದ ಹೆಸರಿನಲ್ಲಿ ಗುತ್ತಿಗೆ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಸಮಾಜ ಸುಧಾರಣೆ, ಬಲವರ್ಧನೆ ಹಾಗೂ ಅಗತ್ಯ ಸಹಾಯ ಧರ್ಮದ ಭಾಗ — ಅದರಲ್ಲಿ ತಪ್ಪೇನಿಲ್ಲ. ಆದರೆ ಅದನ್ನೇ ಆಧಾರ ಮಾಡಿಕೊಂಡು ಸಮಾಜದ ಹೆಸರಿನಲ್ಲಿ ಗುತ್ತಿಗೆ ಪಡೆದು ಜನರಿಗೆ ಅನ್ಯಾಯ ಮಾಡುವ ವ್ಯಕ್ತಿಯಂತಿದ್ದರೆ ಅದು ಜಿ. ಶಂಕರ್” ಎಂದು ಆರೋಪಿಸಿದರು. ಇಂತಹ ಸ್ಥಿತಿ ಉಂಟಾಗಲು ಮಾಜಿ ಸಚಿವ ಗೋಪಾಲ ಪೂಜಾರಿ ನೇರ ಹೊಣೆಗಾರರು ಎಂದು ಅವರು ಹೇಳಿದರು.
ನನಗೂ, ಜಿ. ಶಂಕರ್ ಅವರಿಗೂ ಯಾವುದೇ ವೈಯಕ್ತಿಕವಾಗಿ ದ್ವೇಷ ಇಲ್ಲ. ಆದರೆ ವಾರಾಯಿ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಜಿ. ಶಂಕರ್ ಅವರೊಂದಿಗೆ ಸಂಘರ್ಷ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ ಅವರು, ಸಿದ್ದಾಪುರ ಏತ ನೀರಾವರಿ ಯೋಜನೆ ತಕ್ಷಣ ಆರಂಭಗೊಳ್ಳಬೇಕು ಎಂಬುದು ರೈತರ ಏಕಮತದ ಬೇಡಿಕೆ ಎಂದು ಪ್ರತಾಪ್ ಚಂದ್ರ ಶೆಟ್ಟಿ ಹೇಳಿದರು.

“ಮೌನವೇ ಅನ್ಯಾಯಕ್ಕೆ ಕಾರಣ; ಹೋರಾಟಕ್ಕೆ ಎಲ್ಲರೂ ಒಂದಾಗಬೇಕು” ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ರೈತರ ಹಕ್ಕುಗಳ ಬಗ್ಗೆ ಗಟ್ಟಿಯಾದ ಸಂದೇಶ ನೀಡಿದರು. “ತನಗೆ ತೊಂದರೆಯಾದಾಗ ತಾನೇ ಸಿಡಿದು ನಿಲ್ಲುವ ಗುಣ ರೈತರಲ್ಲಿದ್ದರೆ, ರೈತರಿಗೆ ಅನ್ಯಾಯವಾಗುವುದಿಲ್ಲ. ಸುಮ್ಮನಿದ್ದರೆ ಇಂದಲ್ಲ ನಾಳೆ ಇಂಥ ಸಮಸ್ಯೆಗಳು ನಮ್ಮ ತಲೆಮೇಲೆ ಬರುವುದು ಖಚಿತ. ಇಂದು ಅದು ನಮ್ಮ ತಲೆಮೇಲೆ ಬಂದಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಬಿಟ್ಟುಕೊಡುವ ಮಾತೇ ಇಲ್ಲ” ಎಂದು ಅವರು ಹೇಳಿದರು.
ರೈತರು ಒಗ್ಗಟ್ಟಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದ ಶಾಸಕ ಗಂಟಿಹೊಳೆ, “ಈ ಹೋರಾಟವನ್ನು ನಾವೆಲ್ಲರೂ ಸೇರಿ ಸಂಕಲ್ಪದೊಂದಿಗೆ ಮುಂದುವರಿಸಬೇಕು. ಏತ ನೀರಾವರಿ ಯೋಜನೆ ನಮ್ಮ ಪ್ರದೇಶದ ರೈತರ ಬದುಕಿಗೆ ಅತ್ಯಂತ ಅವಶ್ಯಕವಾದದ್ದು. ಇದಕ್ಕೆ ತಡೆ ಬಂದರೆ ಕೃಷಿ, ಜೀವನೋಪಾಯ ಮತ್ತು ಗ್ರಾಮೀಣ ಆರ್ಥಿಕತೆ ಗಂಭೀರ ಸಂಕಷ್ಟಕ್ಕೆ ಒಳಗಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

ಸರಕಾರದ ತೀರ್ಮಾನವನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದ ಅವರು, “ರೈತರ ಧ್ವನಿಯನ್ನು ಕೇಳದೇ ತೆಗೆದುಕೊಳ್ಳುವ ಯಾವುದೇ ನಿರ್ಣಯಗಳನ್ನು ನಾವು ಒಪ್ಪುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ” ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಸತೀಶ್ ಕಿಣಿ, ಶೇಖರ್ ಕುಲಾಲ್, ಮುಕಾಂಬು, ರಾಜು ಬೆಟ್ಟಿನ್ ಮನೆ, ವಿವಿಧ ಗ್ರಾಮಗಳ ರೈತ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ, ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಸಭೆಯ ನಂತರ ಸಾವಿರಾರು ಮಂದಿ ಸಹಾಯಕ ಕಾರ್ಯ ಪಾಲಕ ಇಂಜಿನಿಯ‌ರ್ ಕಚೇರಿ ವರೆಗೆ ರೈತ ಸಂಘದ ಜಾಥಾದೊಂದಿಗೆ ಬಂದು ಮನವಿ ಮಾಡಲಾಯಿತು.