ಡೈಲಿ ವಾರ್ತೆ:JAN/22/2026

ಸ್ವರ್ಣಾ ನದಿಯಲ್ಲಿ ಆತ್ಮಹತ್ಯೆ ಯತ್ನ ವಿಫಲ: ಮೀನುಗಾರರ ಎಚ್ಚರಿಕೆಯಿಂದ ಉಳಿಯಿತು ಒಂದು ಜೀವ!

ಉಡುಪಿ: ಉಡುಪಿ ಸಮೀಪದ ಕಲ್ಯಾಣಪುರ ಬಳಿಯ ಸ್ವರ್ಣಾ ನದಿಯಲ್ಲಿ ಜಿಗಿದು ಆತ್ಮಹತ್ಯೆಗೈಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಸಮಯೋಚಿತವಾಗಿ ರಕ್ಷಿಸಿದ ಘಟನೆ ಇಂದು ನಡೆದಿದೆ.

ನದಿಯಲ್ಲಿ ದೋಣಿಯ ಮೂಲಕ ಮೀನು ಹಿಡಿಯುತ್ತಿದ್ದ ಮೀನುಗಾರರು, ವ್ಯಕ್ತಿಯೊಬ್ಬನು ಆತ್ಮಹತ್ಯೆ ಮಾಡಲು ಯತ್ನಿಸುತ್ತಿರುವುದನ್ನು ಗಮನಿಸಿ ತಕ್ಷಣ ಕಾರ್ಯಪ್ರವೃತ್ತರಾಗಿ ಆತನನ್ನು ರಕ್ಷಿಸಿದರು. ವಿಷಯ ತಿಳಿದ ಸ್ಥಳೀಯ ಮಾಜಿ ನಗರಸಭಾ ಸದಸ್ಯ ಚಿನ್ಮಯ ಮೂರ್ತಿಯವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಲ್ಪಟ್ಟ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಿದ್ದು, ನಂತರ ಆತನನ್ನು ಅಂಬಲಪಾಡಿಯಲ್ಲಿರುವ ಮನೆಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.

ಸ್ಥಳೀಯರ ತಕ್ಷಣದ ಸ್ಪಂದನೆ ಮತ್ತು ಮಾನವೀಯ ನಡೆ ಕಾರಣದಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಈ ಘಟನೆಯು ಸಮಯೋಚಿತ ಎಚ್ಚರಿಕೆ ಹಾಗೂ ಸಮಾಜದ ಸಹಕಾರ ಎಷ್ಟು ಮಹತ್ವದ್ದೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.