ಡೈಲಿ ವಾರ್ತೆ:JAN/25/2026

ರಾಮಕುಂಜದಲ್ಲಿ ದಾರುಣ ಕುಟುಂಬ ದುರಂತ: ಗುಂಡೇಟಿಗೆ ಅಪ್ಪ-ಮಗನ ಜಗಳ ಅಂತ್ಯ, ಅಪ್ರಾಪ್ತ ಬಾಲಕ ಸಾವು – ತಂದೆ ಗಂಭೀರ

ಪುತ್ತೂರು, ಜ.25: ಕಡಬ ತಾಲೂಕು ರಾಮಕುಂಜ ಗ್ರಾಮದ ಪಾದೆ ಪ್ರದೇಶದಲ್ಲಿ ಶನಿವಾರ ಸಂಜೆ ನಡೆದ ಕುಟುಂಬ ಕಲಹ ದಾರುಣ ದುರಂತಕ್ಕೆ ಕಾರಣವಾಗಿದೆ.

ಅಪ್ಪ–ಮಗನ ನಡುವೆ ನಡೆದ ಜಗಳದ ವೇಳೆ ಅಪ್ರಾಪ್ತ ಬಾಲಕನೋರ್ವ ಕೋವಿ ಗುಂಡೇಟಿಗೆ ಬಲಿಯಾಗಿದ್ದು, ತಂದೆ ಚೂರಿ ಇರಿತದಿಂದ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.


ಮೃತ ಬಾಲಕನನ್ನು ರಾಮಕುಂಜ ನಿವಾಸಿ ವಸಂತ್ ಅಮೀನ್ ಅವರ ಪುತ್ರ ಮೋಕ್ಷ (17) ಎಂದು ಗುರುತಿಸಲಾಗಿದೆ. ವಸಂತ್ ಅಮೀನ್ ಅವರು ಚೂರಿ ಇರಿತದಿಂದ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬ ಕಲಹದ ಹಿನ್ನೆಲೆ ಮನೆಯಲ್ಲಿ ತಂದೆ–ಮಗನ ನಡುವೆ ವಾಗ್ವಾದ ಉಂಟಾಗಿ ಈ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ವೇಳೆ ಮನೆಯಲ್ಲಿ ಇತರ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ.


ಈ ನಡುವೆ ಬಾಲಕನೇ ಸ್ವತಃ ಗುಂಡು ಹಾರಿಸಿಕೊಂಡಿದ್ದಾನೆಯೇ ಅಥವಾ ತಂದೆಯೇ ಮಗನ ಮೇಲೆ ಗುಂಡು ಹಾರಿಸಿದ್ದಾನೆಯೇ ಎಂಬ ಕುರಿತು ಹಲವು ಅನುಮಾನಗಳು ಮೂಡಿವೆ. ಘಟನೆಯ ಕುರಿತು ವಸಂತ್ ಅಮೀನ್ ಅವರ ಪತ್ನಿ ಜಯಶ್ರೀ ಅವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತಿ ವಸಂತ್ ತಮ್ಮ ಮಗನನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ಪತ್ನಿ ಜಯಶ್ರೀ ಅವರು ಪತಿಯೊಂದಿಗೆ ಮನಸ್ತಾಪದ ಹಿನ್ನೆಲೆ ಕಳೆದ ಒಂದು ವರ್ಷದಿಂದ ಮಂಗಳೂರಿನ ತಾಯಿ ಮನೆಯಲ್ಲಿ ವಾಸವಿದ್ದು, ಈ ಅವಧಿಯಲ್ಲಿ ತಂದೆ ಹಾಗೂ ಮಗ ಮಾತ್ರ ಮನೆಯಲ್ಲಿ ವಾಸವಾಗಿದ್ದರು ಎಂದು ಹೇಳಲಾಗಿದೆ. ಮೃತ ಮೋಕ್ಷ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದ.
ಘಟನಾ ಸ್ಥಳಕ್ಕೆ ಕಡಬ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.