ಡೈಲಿ ವಾರ್ತೆ:JAN/25/2026

ಕಲ್ಸಂಕದಲ್ಲಿ ಭೀಕರ ರಸ್ತೆ ಅಪಘಾತ: ಕಂಟೈನರ್ ಅಡಿಗೆ ಸಿಲುಕಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

ಉಡುಪಿ : ಕಲ್ಸಂಕದಲ್ಲಿ ರವಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಪಣಿಯೂರು ನಿವಾಸಿ ಅವಿನಾಶ್ ರಾವ್ (19) ಎಂದು ಗುರುತಿಸಲಾಗಿದೆ. ಅವಿನಾಶ್ ಮಣಿಪಾಲದ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು, ಬಿಬಿಎಂ ವ್ಯಾಸಂಗ ಮಾಡುತ್ತಿದ್ದರು.

ರವಿವಾರ ರಾತ್ರಿ ಅವಿನಾಶ್ ಗೆಳೆಯರೊಂದಿಗೆ ಸ್ಕೂಟರ್‌ನಲ್ಲಿ ಮಲ್ಪೆ ಬೀಚ್‌ನಿಂದ ಮಣಿಪಾಲಕ್ಕೆ ತೆರಳುತ್ತಿದ್ದರು. ಅವರ ಗೆಳೆಯರು ಬೇರೆ ಸ್ಕೂಟರ್‌ನಲ್ಲಿ ಮುಂದೆ ಸಾಗಿದ್ದು, ಅವಿನಾಶ್ ಸಿಗ್ನಲ್ ದಾಟಿ ಮುಂದಕ್ಕೆ ಸಾಗುವ ವೇಳೆ ಪಕ್ಕದಲ್ಲಿ ಸಂಚರಿಸುತ್ತಿದ್ದ ಕಂಟೈನರ್ ವಾಹನದ ಅಡಿಗೆ ಸಿಲುಕಿದ್ದಾರೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಅವಿನಾಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಮಾಹಿತಿ ಪಡೆದ ಉಡುಪಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಅವಿನಾಶ್ ತಂದೆ, ತಾಯಿ ಹಾಗೂ ಸಹೋದರರನ್ನು ಅಗಲಿದ್ದು, ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.